ಬೆಳಗಾವಿ: ಪುಣೆಯ ಕಾರ್ಯಕ್ರಮವೊಂದಕ್ಕೆ ತೆರಳುತ್ತಿರುವಾಗ ಮಹಾರಾಷ್ಟ್ರ ಗಡಿ ಉಸ್ತುವಾರಿ ಸಚಿವ ಚಂದ್ರಕಾಂತ ಪಾಟೀಲ ಮುಖಕ್ಕೆ ಯುವಕನೋರ್ವ ಮಸಿ ಎರಚಿದ ಘಟನೆ ನಿನ್ನೆ ಮಧ್ಯಾಹ್ನ ನಡೆದಿದೆ. ಮೂವರು ಆರೋಪಿಗಳನ್ನು ಪುಣೆ ಮಹಾನಗರ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಇತ್ತೀಚೆಗೆ ಮಹಾತ್ಮಾ ಪುಲೆ, ಡಾ.ಬಿ.ಆರ್.ಅಂಬೇಡ್ಕರ್ ಬಗ್ಗೆ ಚಂದ್ರಕಾಂತ ಪಾಟೀಲ ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದರು. ಇದರಿಂದ ಕೋಪಗೊಂಡಿದ್ದ ವಿವಿಧ ಪಕ್ಷಗಳು ನಿನ್ನೆ ಬೆಳಗ್ಗೆ ಪಿಂಪ್ರಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಚೌಕ್ನಲ್ಲಿ ಪ್ರತಿಭಟನೆ ನಡೆಸಿದ್ದರು. ಉದ್ಧವ್ ಠಾಕ್ರೆ ಅವರ ಶಿವಸೇನೆ ಗುಂಪು ಕೂಡ ಕಾರ್ಯಕ್ರಮದ ಸ್ಥಳದ ಬಳಿ ಪ್ರತಿಭಟನೆ ನಡೆಸಿ ಚಂದ್ರಕಾಂತ್ ಪಾಟೀಲ್ ವಿರುದ್ಧ ಘೋಷಣೆಗಳನ್ನು ಕೂಗಿದ್ದರು.
ಈ ಪ್ರತಿಭಟನೆಯಲ್ಲಿದ್ದ ಯುವಕನೋರ್ವ ಪಕ್ಕದಲ್ಲೇ ಬೆಂಗಾವಲು ಸಿಬ್ಬಂದಿಯಿದ್ದರೂ ಚಂದ್ರಕಾಂತ ಪಾಟೀಲರ ಮುಖಕ್ಕೆ ಮಸಿ ಎರಚಿ ಪರಾರಿಯಾಗಲು ಯತ್ನಿಸಿದ್ದಾನೆ. ಈ ಸಂದರ್ಭದಲ್ಲಿ ಘಟನಾ ಸ್ಥಳದಲ್ಲಿದ್ದ ಪೊಲೀಸರು ಯುವಕ ಹಾಗೂ ಪ್ರತಿಭಟನೆಯಲ್ಲಿದ್ದು ಕೃತ್ಯದಲ್ಲಿ ಜೊತೆಗಿದ್ದ ಇನ್ನಿಬ್ಬರನ್ನು ವಶಕ್ಕೆ ಪಡೆದರು.
ಇದನ್ನೂ ಓದಿ: ಸಾರ್ವಜನಿಕ ಆಸ್ತಿ ಹಾನಿ ಮಾಡೋದು ಸಮಸ್ಯೆಗೆ ಪರಿಹಾರವಲ್ಲ: ಡಾ ಶಿವರಾಜ್ ಪಾಟೀಲ್