ಬೆಳಗಾವಿ: ಎಂಇಎಸ್‌ನ ಕರಾಳ ದಿನಕ್ಕೆ ಬೆಳಗಾವಿ ಜಿಲ್ಲಾಡಳಿತ ಬ್ರೇಕ್ ಹಾಕಿದ ಹಿನ್ನೆಲೆಯಲ್ಲಿ ಪೊಲೀಸರ ಜೊತೆ ಎಂಇಎಸ್, ಶಿವಸೇನೆ ಕಾರ್ಯಕರ್ತರು ವಾಗ್ವಾದ ನಡೆಸಿದ್ದಾರೆ.
ಕಪ್ಪು ಬಟ್ಟೆ ಧರಿಸಿ, ಕಪ್ಪು ಬಾವುಟ ಹಿಡಿದು ಪ್ರತಿಭಟನೆಗೆ ಮುಂದಾಗಿದ್ದ ಎಂಇಎಸ್, ಶಿವಸೇನೆ ಕಾರ್ಯಕರ್ತರಿಗೆ ತಡೆಯೊಡ್ಡಲಾಗಿದೆ. ಪ್ರತಿ ವರ್ಷ ರಾಜ್ಯೋತ್ಸವಕ್ಕೆ ಪ್ರತಿಯಾಗಿ ಎಂಇಎಸ್ ಕಾರ್ಯಕರ್ತರು ಕರಾಳ ದಿನ ಆಚರಿಸುತ್ತಿದ್ದರು. ಈ ವರ್ಷ ಎಂಇಎಸ್ ಕರಾಳ ದಿನಾಚರಣೆಗೆ ಜಿಲ್ಲಾಡಳಿತ ಬ್ರೇಕ್ ಬಿದ್ದ ಪರಿಣಾಮ ಕಂಗಾಲಾಗಿರುವ ಎಂಇಎಸ್ ನಾಯಕರು ಮಹಾರಾಷ್ಟ್ರ ಸರ್ಕಾರದ ಮೊರೆ ಹೋಗಿದ್ದಾರೆ.
ಇಂದು ಕಪ್ಪು ಪಟ್ಟಿ ಧರಿಸಿ ಮಹಾರಾಷ್ಟ್ರ ಸಚಿವರು ಕಾರ್ಯನಿರ್ವಹಿಸಲಿದ್ದಾರೆ. ನಿನ್ನೆಯಷ್ಟೇ ಈ ಬಗ್ಗೆ ಮಹಾರಾಷ್ಟ್ರ ಸಚಿವ ಹುಸನ್ ಮುಶ್ರಿಫ್ ಹೇಳಿಕೆ ನೀಡಿದ್ದು, ರಾಜ್ಯದ ಆಕ್ರೋಶಕ್ಕೆ ಎಡೆಮಾಡಿಕೊಟ್ಟಿತ್ತು.
ಈ ಮಧ್ಯೆ ಜಿಲ್ಲೆಯಲ್ಲಿ ರಾಜ್ಯೋತ್ಸವದಂದು ಕರಾಳ ದಿನ ಆಚರಿಸಲು ಎಂಇಎಸ್, ಶಿವಸೇನೆ ಯತ್ನಿಸಿದ್ದು, ಉದ್ಧಟತನ ಮೆರೆದವರನ್ನು ಪೊಲೀಸರು ವಶಕ್ಕೆ ಪಡೆದರು. ಬಳಿಕ ಪೊಲೀಸರು ಎಚ್ಚರಿಕೆ ನೀಡಿ ಬಿಡುಗಡೆ ಮಾಡಿದರು.