ಬೆಳಗಾವಿ: ವಿಧಾನಸಭೆ ಚುನಾವಣೆಯಲ್ಲಿ ಸೋತರೂ ಸಚಿವ ಸ್ಥಾನದ ಜತೆ ಡಿಸಿಎಂ ಹುದ್ದೆ ಗಿಟ್ಟಿಸಿಕೊಂಡು ಅಚ್ಚರಿ ಮೂಡಿಸಿದ್ದ ಲಕ್ಷ್ಮಣ ಸವದಿ ಬೆಳಗಾವಿ ಜಿಲ್ಲಾ ಉಸ್ತುವಾರಿ ಹುದ್ದೆ ಮೇಲೂ ಕಣ್ಣಿಟ್ಟಿದ್ದರು.
ಸವದಿ ಜತೆಗೆ ಬಿಜೆಪಿ ಸರ್ಕಾರದ ಏಕೈಕ ಮಹಿಳಾ ಸಚಿವೆ ಶಶಿಕಲಾ ಜೊಲ್ಲೆ ಕೂಡ ಉಸ್ತುವಾರಿ ಸಚಿವೆ ಆಗಲು ಕಸರತ್ತು ನಡೆಸಿದ್ದರು. ಈ ಇಬ್ಬರಿಗೆ ಬೆಳಗಾವಿ ಜಿಲ್ಲೆಯ ಹೊಣೆ ನೀಡಬಾರದು ಎಂದು ಸಚಿವ ಸ್ಥಾನ ವಂಚಿತ ಜಿಲ್ಲೆಯ ಶಾಸಕರು ಸಿಎಂ ಮೇಲೆ ಒತ್ತಡ ಹೇರಿದ್ದರು ಎನ್ನಲಾಗಿತ್ತು. ಜಿಲ್ಲೆಯ ನಾಯಕರ ಕಿತ್ತಾಟದಿಂದ ಕಂಗೆಟ್ಟ ಸಿಎಂ ಬಿಎಸ್‍ವೈ ಬೃಹತ್ ಕೈಗಾರಿಕೆ ಸಚಿವ ಜಗದೀಶ ಶೆಟ್ಟರ್ ಅವರಿಗೆ ಜಿಲ್ಲೆಯ ಹೊಣೆ ವಹಿಸಿದ್ದಾರೆ. ಇದರ ಜತೆಗೆ ಧಾರವಾಡ ಕ್ಷೇತ್ರವನ್ನೂ ಇವರಿಗೆ ಹೆಚ್ಚುವರಿ ಹೊಣೆಯಾಗಿ ವಹಿಸಲಾಗಿದೆ.
ಕತ್ತಿ ಕೋಪ ತಣ್ಣಗಾಗಿಸಿದ ಸಿಎಂ:
ಸೋತರು ಲಕ್ಷ್ಮಣ ಸವದಿ ಅವರ ಸಂಪುಟ ಸೇರ್ಪಡೆಯಿಂದ ಬಿಜೆಪಿ ನಾಯಕರ ವಿರುದ್ಧ ಉಮೇಶ ಕತ್ತಿ ಕೆಂಡಾಮಂಡಲರಾಗಿದ್ದರು. 8 ಸಲ ಗೆಲುವು ಸಾಧಿಸಿದ ಉಮೇಶ ಕತ್ತಿ ಅವರನ್ನು ಸಂಪುಟದಿಂದ ಕೈ ಬಿಟ್ಟಿದಕ್ಕೆ ಬಾಲಚಂದ್ರ ಜಾರಕಿಹೊಳಿ ಕೂಡ ಅಸಮಾಧಾನ ವ್ಯಕ್ತಪಡಿಸಿ, ಕತ್ತಿ ಪರ ಬ್ಯಾಟಿಂಗ್ ಮಾಡಿದ್ದರು. ಜಿಲ್ಲೆಯ ಸಹಕಾರ ಕ್ಷೇತ್ರದ ಚುನಾವಣೆಗಳಲ್ಲಿ ಕತ್ತಿ-ಜಾರಕಿಹೊಳಿ ಒಂದು ಬಣವಾದರೆ ಸವದಿ, ಜೊಲ್ಲೆ, ಕೋರೆ ಕುಟುಂಬ ಮತ್ತೊಂದು ಬಣ. ಸಚಿವ ಸ್ಥಾನ ತಪ್ಪಿದಕ್ಕೆ ಬಂಡಾಯವೆದಿದ್ದ ಉಮೇಶ ಕತ್ತಿ ಅವರನ್ನು ಸಿಎಂ ಮನ ವೊಲಿಸಿದ್ದರು. ಸಚಿವ ಸ್ಥಾನ ಕೊಡದಿದ್ದರೆ ಇರಲಿ ಸವದಿ ಅವರಿಗೆ ಜಿಲ್ಲಾ ಉಸ್ತುವಾರಿ ಹೊಣೆ ನೀಡಬಾರದು ಎಂದು ಸಚಿವ ಸ್ಥಾನ ವಂಚಿತ ಜಿಲ್ಲೆಯ ಶಾಸಕರು ಪಟ್ಟು ಹಿಡಿದಿದ್ದರು. ಉಮೇಶ ಕತ್ತಿ, ಬಾಲಚಂದ್ರ ಜಾರಕಿಹೊಳಿ ಸೇರಿದಂತೆ ಸಚಿವ ಸ್ಥಾನ ವಂಚಿತ ಶಾಸಕರ ಮಾತಿಗೆ ಸಿಎಂ ಮಣೆ ಹಾಕಿದ್ದು, ಮಾಜಿ ಸಿಎಂ ಜಗದೀಶ್ ಶೆಟ್ಟರ್‌ಗೆ ಮಣೆ ಹಾಕಲಾಗಿದೆ. ಪ್ರವಾಹದಿಂದ ತತ್ತರಿಸಿರುವ ಜಿಲ್ಲೆಗೆ ಸ್ಥಳೀಯರನ್ನು ನೇಮಿಸದೇ ಹೊರಗಿನವರಿಗೆ ಉಸ್ತುವಾರಿ ನೀಡಿರುವುದು ಸ್ಥಳೀಯರ ಆಕ್ರೋಶಕ್ಕೂ ಕಾರಣವಾಗಿದೆ.
ಬೀಗರ ಜಿಲ್ಲೆಯ ಹಿಡಿತ:
ಗಡಿ ಜಿಲ್ಲೆ ಬೆಳಗಾವಿಯ ಹಿಡಿತ ಹೊಂದಿದ್ದ ಕತ್ತಿ ಹಾಗೂ ಜಾರಕಿಹೊಳಿ ಕುಟುಂಬದ ರಾಜಕೀಯ ಪ್ರಭಾವ ಸದ್ಯ ಕ್ಷೀಣವಾಗುತ್ತಿದೆ. ರಾಜಕೀಯ ಬೆಳವಣಿಗೆಯಲ್ಲಿ ಜಿಲ್ಲೆಯ ಹಿಡಿತ ಶೆಟ್ಟರ್-ಅಂಗಡಿ ಬೀಗರ ಕೈ ಸೇರುತ್ತಿದೆ ಎನ್ನಲಾಗ್ತಿದೆ. ಮಾಜಿ ಸಿಎಂ ಜಗದೀಶ ಶೆಟ್ಟರ್ ಹಾಗೂ ಕೇಂದ್ರ ಸಚಿವ ಸುರೇಶ ಅಂಗಡಿ ಅವರಿಬ್ಬರೂ ಬೀಗರು. ಸುರೇಶ ಅಂಗಡಿ ಅವರ ದ್ವಿತೀಯ ಸುಪುತ್ರಿ ಶ್ರದ್ಧಾ ಅವರನ್ನು ಜಗದೀಶ ಶೆಟ್ಟರ್ ಅವರ ದ್ವಿತೀಯ ಪುತ್ರ ಸಂಕಲ್ಪ್ ಅವರಿಗೆ ಕೊಡಲಾಗಿದೆ. ನಾಲ್ಕು ಸಲ ಸಂಸದರಾಗಿ ಆಯ್ಕೆ ಆಗಿರುವ ಸುರೇಶ ಅಂಗಡಿ ಕೇಂದ್ರ ರೈಲ್ವೆ ಇಲಾಖೆ ರಾಜ್ಯ ಸಚಿವರೂ ಆಗಿದ್ದಾರೆ. ಈ ಹಿಂದೆ ಬೆಳಗಾವಿ ಉಸ್ತುವಾರಿ ಸಚಿವರಾಗಿದ್ದ ಜಗದೀಶ ಶೆಟ್ಟರ್ ಅವರಿಗೆ ಬೃಹತ್ ಕೈಗಾರಿಕೆ ಜತೆಗೆ ಮತ್ತೊಮ್ಮೆ ಬೆಳಗಾವಿ ಉಸ್ತುವಾರಿ ಸಚಿವ ಸ್ಥಾನದ ಹೊಣೆ ವಹಿಸಲಾಗಿದೆ.