ಬೆಳಗಾವಿ: ರಸ್ತೆ ಬದಿಗೆ ನಿಂತಿದ್ದ ಮಹಿಳೆಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಕೇಳಗೆ ಬಿದ್ದು ಸ್ಥಳದಲ್ಲೇ ಮೃತಪಟ್ಟ ಘಟನೆ ಸವದತ್ತಿ ತಾಲೂಕಿನಲ್ಲಿ ನಡೆದಿದೆ.
ಸವದತ್ತಿ ತಾಲೂಕಿನ ಹಿರೇಕುಂಬಿ ನಿವಾಸಿ ಗಂಗಾಧರ್ ನರಗುಂದ (29) ಮೃತ ದುರ್ದೈವಿ. ಈತ ಖಾಸಗಿ ಬ್ಯಾಂಕ್ನಲ್ಲಿ ಕೆಲಸ ಮಾಡುತ್ತಿದ್ದು, ಕೆಲಸದ ನಿಮಿತ್ತ ಸವದತ್ತಿಗೆ ಹೋಗಿ ಮರಳಿ ಬರುವಾಗ ಈ ಅಪಘಾತ ಸಂಭವಿಸಿದೆ. ಖಾಸಗಿ ಶಾಲೆಯ ಬಳಿ ರಸ್ತೆ ಬದಿಗೆ ನಿಂತಿದ್ದ ಶಿಕ್ಷಕಿ ಫಾತೀಮಾ ಸೌದಗಾರ ಎಂಬುವವರಿಗೆ ಬೈಕ್ ಡಿಕ್ಕಿ ಹೊಡೆಸಿದ್ದಾನೆ. ಡಿಕ್ಕಿ ಹೊಡೆದ ಪರಿಣಾಮ ಮಹಿಳೆ ಕೂಡ ಗಂಭೀರ ಗಾಯಗೊಂಡಿದ್ದು, ಅವರನ್ನು ಕೀಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಅಪಘಾತ ಸಂಭವಿಸಿದ ಬೈಕ್ನಲ್ಲಿ ಮೂವರು ಕುಳಿತಿದ್ದರು ಎನ್ನಲಾಗುತ್ತಿದ್ದು, ಹಿಂಬದಿ ಸವಾರರಾದ ಪುಂಡಲೀಕ ತೇಗೂರ ಮತ್ತು ಫಕ್ಕಿರಪ್ಪ ಬನ್ನೂರ ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಈ ಕುರಿತು ಸವದತ್ತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.