ಬೆಳಗಾವಿ: ಬಿಮ್ಸ್ ಕೋವಿಡ್ ಆಸ್ಪತ್ರೆ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ ಆರೋಪಿಗಳನ್ನು ತಕ್ಷಣ ಬಂಧಿಸಬೇಕು ಹಾಗೂ ಆರೋಗ್ಯ ಸಿಬ್ಬಂದಿಗೆ ರಕ್ಷಣೆ ಒದಗಿಸಬೇಕೆಂದು ಒತ್ತಾಯಿಸಿ ಆರೋಗ್ಯ ಸಿಬ್ಬಂದಿ ಬಿಮ್ಸ್ ಆಡಳಿತ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ನಿನ್ನೆ ತಡರಾತ್ರಿ ಕೊರೊನಾ ಸೋಂಕಿನಿಂದ ಮೃತಪಟ್ಟ ವ್ಯಕ್ತಿಯೊಬ್ಬನ ಕುಟುಂಬಸ್ಥರು ಬಿಮ್ಸ್ ಆಸ್ಪತ್ರೆಯ ಆಂಬ್ಯುಲೆನ್ಸ್ಗೆ ಬೆಂಕಿ ಹಚ್ಚಿ ಆರೋಗ್ಯ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದರು. ತುಂಬಾ ಜನ ಏಕಾಏಕಿ ಕೋವಿಡ್ ಆಸ್ಪತ್ರೆಯ ಒಳಗೆ ನುಗ್ಗಿದ್ದರಿಂದ ವೈದ್ಯರನ್ನು ಶೌಚಾಲಯದಲ್ಲಿ ಕೂಡಿ ಹಾಕಿ ರಕ್ಷಣೆ ಮಾಡಲಾಯಿತು. ಆಕ್ರೋಶಿತರು ಓರ್ವ ಪೊಲೀಸ್ ಕಾನ್ಸ್ಟೇಬಲ್ ಮೇಲೆಯೂ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ.
ವೈದ್ಯರ ಮೇಲೆ ಹಲ್ಲೆ ನಡೆದರೂ ಯಾವ ಹಿರಿಯ ಅಧಿಕಾರಿಗಳೂ ನಮ್ಮ ಸಹಾಯಕ್ಕೆ ಬಂದಿಲ್ಲ. ಇಲ್ಲಿ ಆರೋಗ್ಯ ಸಿಬ್ಬಂದಿಗೆ ಯಾವುದೇ ರಕ್ಷಣೆ ಇಲ್ಲ. ಕುಟುಂಬವನ್ನು ತೊರೆದು ನಾವು ಕೊರೊನಾ ಸೋಂಕಿತರ ಸೇವೆ ಮಾಡುತ್ತಿದ್ದೇವೆ. ಆದ್ರೂ ನಮ್ಮ ಮೇಲೆ ಹಲ್ಲೆ ಮಾಡಲಾಗುತ್ತಿದೆ. ಸರ್ಕಾರ ನಮಗೆ ರಕ್ಷಣೆ ಒದಗಿಸಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಆಸ್ಪತ್ರೆಯ ಭದ್ರತಾ ಸಿಬ್ಬಂದಿಯ ಸಮಯ ಪ್ರಜ್ಞೆಯಿಂದ ದೊಡ್ಡ ಅನಾಹುತ ತಪ್ಪಿದೆ. ಆಕ್ರೋಶಿತರು ಆಸ್ಪತ್ರೆಯ ಒಳ ನುಗ್ಗುತ್ತಿದ್ದಂತೆ ಭದ್ರತಾ ಸಿಬ್ಬಂದಿ ಅವರನ್ನು ಗೇಟ್ ಬಳಿ ತಡೆದು ವೈದ್ಯರನ್ನು ಶೌಚಾಲಯದಲ್ಲಿ ಕೂಡಿ ಹಾಕಿ ರಕ್ಷಣೆ ಮಾಡಿದ್ದಾರೆ. ಓರ್ವ ಪೊಲೀಸ್ ಸಿಬ್ಬಂದಿ ಮೇಲೆ ಕೂಡ ಹಲ್ಲೆ ನಡೆದಿದ್ದು, ಅವರನ್ನು ಕೂಡ ಸ್ಕ್ಯಾನಿಂಗ್ ರೂಮ್ನಲ್ಲಿ ಕೂಡಿ ಹಾಕಿ ದೊಡ್ಡ ಅನಾಹುತದಿಂದ ಕಾಪಾಡಲಾಗಿದೆ ಎಂದರು.