ಬೆಳಗಾವಿ: ಸಗಟು ತರಕಾರಿ ಮಾರುಕಟ್ಟೆಯಲ್ಲಿ ಹೆಚ್ಚು ಜನಸಂದಣಿ ಸೇರುತ್ತಿರುವುದರಿಂದ ರೈತರು ಮಧ್ಯಾಹ್ನ 2 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ಬೇಡಿಕೆ ಇರುವಷ್ಟು ಮಾತ್ರ ತರಕಾರಿಗಳನ್ನು ವ್ಯಾಪಾರಕ್ಕಾಗಿ ತರಬೇಕು ಎಂದು ಎಪಿಎಂಸಿ ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳು ತಿಳಿಸಿದ್ದಾರೆ.
ಅದೇ ರೀತಿ ನಗರದಲ್ಲಿ ಮಾರಾಟಕ್ಕಾಗಿ ಖರೀದಿ ಮಾಡುವ ಚಿಲ್ಲರೆ ವರ್ತಕರು ಮತ್ತು ಸಗಟು ಖರೀದಿದಾರರು ಬೆಳಿಗ್ಗೆ 6 ಗಂಟೆಯಿಂದ 11 ಗಂಟೆಯವರೆಗೆ ಮಾತ್ರ ಸರದಿ ಸಾಲಿನಲ್ಲಿ ನಿಂತು ಖರೀದಿಸಬೇಕು ಎಂದು ಕೋರಿದ್ದಾರೆ.
ಒಂದೇ ಕಡೆ ಗುಂಪಿನಲ್ಲಿ ಸೇರುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಇದ್ದಲ್ಲಿ ಸಾಂಕ್ರಾಮಿಕ ರೋಗ ತಡೆಗಟ್ಟುವುದು ಕಠಿಣವಾಗುತ್ತದೆ. ಅದೂ ಅಲ್ಲದೇ ಬೆಳಗಾವಿ ನಗರದ ನಾಗರಿಕರು ತರಕಾರಿ ಖರೀದಿಸಲು ನೇರವಾಗಿ ಎಪಿಎಂಸಿಗೆ ಬರುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ ಎಂದಿದ್ದಾರೆ.
ತೋಟಗಾರಿಕೆ ಇಲಾಖೆಯಿಂದ ನಗರದ ಎಲ್ಲಾ ವಾರ್ಡ್ಗಳಲ್ಲಿ ಪ್ರತಿದಿನ ತರಕಾರಿ ಮಾರಾಟ ಮಾಡಲು ವ್ಯವಸ್ಥೆ ಮಾಡಲಾಗಿದ್ದು, ಆತಂಕಪಡುವ ಅವಶ್ಯಕತೆ ಇಲ್ಲ. ಆದಕಾರಣ, ಎಲ್ಲ ನಾಗರಿಕರು ಕೋವಿಡ್-19 ನಿಯಂತ್ರಣ ಮಾಡಲು ಸಹಕರಿಸಬೇಕೆಂದು ತಿಳಿಸಿದ್ದಾರೆ.