ಚಿಕ್ಕೋಡಿ(ಬೆಳಗಾವಿ): ಪ್ರವಾಹ ಸಂತ್ರಸ್ತರಿಗೆ ಪರಿಹಾರ ಸಿಗದ ಹಿನ್ನೆಲೆ ಬೆಳಗಾವಿ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲು ಹೊರಟಿದ್ದ ರೈತರನ್ನು ಪೊಲೀಸರು ತಡೆದಿರುವ ಘಟನೆ ನಡೆದಿದೆ.
ಪ್ರವಾಹ ಸಂತ್ರಸ್ತರಿಗೆ ಪರಿಹಾರ ಸಿಗದ ಹಿನ್ನೆಲೆ ರೈತರು ಬೆಳಗಾವಿ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದ್ದರು. ಆದರೆ ಅವರ ಪ್ರತಿಭಟನೆಗೂ ಮುನ್ನವೇ ಪೊಲೀಸರು ಅಥಣಿ, ಚಿಕ್ಕೋಡಿ, ರಾಯಬಾಗ ತಾಲೂಕಿನಿಂದ ಬರುತ್ತಿದ್ದ ರೈತರನ್ನು ತಡೆದಿದ್ದಾರೆ.
ಆದರೆ, ಅಷ್ಟಕ್ಕೆ ಸುಮ್ಮನಾಗದ ರೈತರು ಚಿಕ್ಕೋಡಿ ತಾಲೂಕಿನ ಕೇರೂರ ಗ್ರಾಮದ ರಾಜ್ಯ ಹೆದ್ದಾರಿಯಲ್ಲಿ ಪ್ರತಿಭಟನೆ ನಡೆಸಿ ತಮ್ಮನ್ನು ಬೆಳಗಾವಿ ಜಿಲ್ಲಾಧಿಕಾರಿಗಳ ಕಚೇರಿಗೆ ಹೋಗಲು ಬಿಡುವಂತೆ ಮನವಿ ಮಾಡಿದರು. ಆದರೆ ಪೊಲೀಸರು ಕೋವಿಡ್-19 ಸಲುವಾಗಿ ಇದಕ್ಕೆ ಅನುವು ಮಾಡಿಕೊಟ್ಟಿಲ್ಲ. ಈ ಹಿನ್ನೆಲೆ ಚಿಕ್ಕೋಡಿ ರೈತ ಸಂಘಟನೆಯ ಪದಾಧಿಕಾರಿಗಳು ಚಿಕ್ಕೋಡಿ ತಹಶೀಲ್ದಾರ ಶುಭಾಸ್ ಸಂಪಗಾವಿ ಮೂಲಕ ಸಿಎಂ ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಿದರು.