ಬೆಳಗಾವಿ : ಮಹಾನಗರ ಪಾಲಿಕೆ ಚುನಾವಣೆಗೆ ಆಗಸ್ಟ್ 16ರಂದು ಅಧಿಸೂಚನೆ ಹೊರಡಿಸಲಾಗುವುದು ಎಂದು ಡಿಸಿ ಎಂ ಜಿ ಹಿರೇಮಠ ಹೇಳಿದರು.
ಮಹಾನಗರ ಪಾಲಿಕೆ ಕಚೇರಿಯಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಾನಗರ ಚುನಾವಣೆಗೆ ಸಂಬಂಧಿಸಿದಂತೆ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಆಗಸ್ಟ್16ರಂದು ಚುನಾವಣಾ ಅಧಿಸೂಚನೆ ಹೊರಡಿಸಲಾಗುತ್ತದೆ. ಆ.23ರಂದು ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದೆ.
ಆ.24ರಂದು ನಾಮಪತ್ರಗಳನ್ನು ಪರಿಶೀಲಿಸಲಾಗುತ್ತದೆ. ಆ.26ರಂದು ನಾಮಪತ್ರಗಳನ್ನು ಹಿಂಪಡೆಯಲು ಕೊನೆ ದಿನವಾಗಿದೆ. ಮತದಾನ ಸೆ.3ರಂದು ನಡೆಯಲಿದೆ. ಮತದಾನಕ್ಕೆ ಬೆಳಗ್ಗೆ 7ರಿಂದ ಸಂಜೆ 5 ಗಂಟೆವರೆಗೆ ಅವಕಾಶ ನೀಡಲಾಗಿದೆ. ಸೆ.6ರಂದು ಮತ ಏಣಿಕೆ ಕಾರ್ಯ ನಡೆಯಲಿದೆ ಎಂದರು.
ಮಹಾನಗರ ವ್ಯಾಪ್ತಿಯಲ್ಲಿ 58 ವಾರ್ಡ್ಗಳಿಗೆ ನಡೆಯುವ ಚುನಾವಣೆಗೆ ಈಗಾಗಲೇ ಚುನಾವಣಾಧಿಕಾರಿಗಳು, ಸಹಾಯಕ ಅಧಿಕಾರಿಗಳಿಗೆ ಕಚೇರಿಯನ್ನು ಮಹಾನಗರ ಪಾಲಿಕೆಯಲ್ಲಿ ಸ್ಥಾಪಿಸಲಾಗಿದೆ. ಎಲ್ಲಾ ಮತಗಟ್ಟೆಗಳನ್ನು ನೂರಕ್ಕೆ ನೂರಷ್ಟು ಪರಿಶೀಲಿಸಿ ಮೂಲಸೌಕರ್ಯ ಕಲ್ಪಿಸಲು ಸೂಚನೆ ನೀಡಲಾಗಿದೆ ಎಂದರು.
ಸೆ.9ರಂದು ಅಂತಿಮ ಮತದಾರರ ಪಟ್ಟಿಗಳನ್ನು ಸಿದ್ಧಪಡಿಸಲಾಗುವುದು. ಬೆಳಗಾವಿ ಮಹಾನಗರ ಪಾಲಿಕೆ ವ್ಯಾಪ್ತಿಯ 58 ವಾರ್ಡ್ಗಳ ಪೈಕಿ 2,13,526 ಪುರುಷರು ಹಾಗೂ 2,14,838 ಮಹಿಳಾ ಮತದಾರರು ಸೇರಿ ಒಟ್ಟು 4,28,364 ಮತದಾರರಿದ್ದಾರೆ. 402 ಮೂಲ ಮತಗಟ್ಟೆಗಳು ಸೇರಿ 415 ಮತಗಟ್ಟೆಗಳನ್ನು ತೆರೆಯಲಾಗಿದೆ ಎಂದು ಜಿಲ್ಲಾಧಿಕಾರಿಗಳು ಹೇಳಿದರು.
ಓದಿ: ಆ. 23 ರಿಂದ 9 -12ನೇ ತರಗತಿವರೆಗಿನ ಶಾಲೆಗಳು ಪ್ರಾರಂಭ: ಸಚಿವ ಬಿ.ಸಿ. ನಾಗೇಶ್
ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಇವಿಎಂ ಮಿಷನ್ಗಳನ್ನು ಬಳಕೆ ಮಾಡಿಕೊಳ್ಳಲಾಗುತ್ತಿದ್ದು, ಮತ ಪತ್ರದಲ್ಲಿ ಅಭ್ಯರ್ಥಿಗಳು ಭಾವಚಿತ್ರಗಳನ್ನು ಮುದ್ರಿಸಲಾಗಿದೆ. ಮತ ಯಂತ್ರದಲ್ಲಿ ಮೊದಲ ಬಾರಿಗೆ ನೋಟಾ(NOTA) ಬಟನ್ ಒತ್ತಲು ಮತದಾರರಿಗೆ ಅವಕಾಶ ನೀಡಲಾಗುತ್ತಿದೆ. ಇದಲ್ಲದೆ ಚುನಾವಣಾ ಯಶಸ್ವಿಯಾಗಿ ನಡೆಸಲು ಈಗಾಗಲೇ ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಿಕೊಳ್ಳಲಾಗಿದೆ. ಪೊಲೀಸ್ ಇಲಾಖೆ ಕೂಡ ಸಕಲ ಸಿದ್ಧತೆ ಮಾಡಿಕೊಂಡಿದೆ ಎಂದರು.