ಬೆಳಗಾವಿ: ಮೂರು ರಾಜ್ಯಗಳ ಸಂಪರ್ಕ ಕೊಂಡಿಯಾಗಿರುವ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಬೆಳಗಾವಿಯ ರಾಣಿ ಚೆನ್ನಮ್ಮ ಮೃಗಾಲಯ ಪ್ರವಾಸೋದ್ಯಮ ಬೆಳವಣಿಗೆಗೆ ಪೂರಕವಾಗಲಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ತಿಳಿಸಿದರು.
ಭೂತರಾಮನಹಟ್ಟಿ ರಾಣಿ ಚೆನ್ನಮ್ಮ ಮೃಗಾಲಯದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಮೈಸೂರು ಮಾದರಿಯಲ್ಲಿ ಬೆಳಗಾವಿಯ ಮೃಗಾಲಯಕ್ಕೆ ಒತ್ತು ನೀಡಲಾಗುವುದು. ಇದರಿಂದ ಉತ್ತರ ಕರ್ನಾಟಕ, ದಕ್ಷಿಣ ಮಹಾರಾಷ್ಟ್ರ, ಗೋವಾ ಮೂರು ರಾಜ್ಯಗಳ ಪ್ರವಾಸಿಗರು, ಪ್ರಾಣಿಪ್ರಿಯರಿಗೆ ಅನುಕೂಲವಾಗಲಿದೆ. ಅದರಲ್ಲಿಯೂ ಉತ್ತರ ಕರ್ನಾಟಕ ಜನತೆ ಮೈಸೂರಿಗೆ ಪ್ರಾಣಿ ವೀಕ್ಷಣೆಗೆ ಹೋಗುವುದು ತಪ್ಪಲಿದೆ ಎಂದರು.
ಮೊದಲ ಹಂತದಲ್ಲಿ ಎರಡು ವರ್ಷದಲ್ಲಿ 16 ಕೋಟಿ ರೂ. ವೆಚ್ಚದಲ್ಲಿ ಮೃಗಾಲಯ ಅಭಿವೃದ್ದಿಗೊಳಿಸಲಾಗಿದೆ. ಈಗಾಗಲೇ ಮೂರು ಸಿಂಹಗಳನ್ನು ತರಲಾಗಿದೆ. ಚಿರತೆ, ಹುಲಿ ಸೇರಿ ಅನೇಕ ಪ್ರಾಣಿಗಳು ಆಗಮಿಸಲಿವೆ. ಇನ್ನೂ ಎರಡು ವಾರದಲ್ಲಿ ಹುಲಿ ಸಫಾರಿಗೆ ಅವಕಾಶ ಮಾಡಿಕೊಡಲಾಗುತ್ತಿದೆ. ಮೃಗಾಲಯಕ್ಕೆ ನೀರನ ಸಮಸ್ಯೆ ನೀಗಿಸಲು, ಮಾರ್ಕಂಡೇಯ ನದಿ ಮೂಲಕ ನರೇಗಾ ಯೋಜನೆಯಡಿ ಎರಡು ಕರೆ ನಿರ್ಮಿಸಲಾಗುತ್ತಿದೆ. ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸಭೆ ನಡೆಸಿ ಸಫಾರಿಗೆ ಅನೂಕುಲವಾಗುವ ವಾಹನಗಳ ಪೂರೈಕೆಗೆ ಬೇಡಿಕೆ ಇಡಲಾಗುವುದು ಎಂದರು.
ಸಿಸಿಎಫ್ ಬಸವರಾಜ್ ಪಾಟೀಲ್ ಮಾತನಾಡಿ, ಪ್ರಾಣಿಗಳ ದತ್ತು ಪಡೆಯಲು ಅವಕಾಶ ಕಲ್ಪಿಸಲಾಗುತ್ತಿದೆ. ಝೂ ಆ್ಯಪ್ ಮೂಲಕ ಸಾರ್ವಜನರಿಕರು ಪ್ರಾಣಿಗಳ ದತ್ತು ಪಡೆಯಬಹುದಾಗಿದೆ. ಹುಲಿ, ಸಿಂಹಗಳ ದತ್ತು ಪಡೆಯಲು ಒಂದು ವರ್ಷಕ್ಕೆ ಒಂದು ಲಕ್ಷ ರೂ. ಉಳಿದಂತೆ ಇತರ ಪ್ರಾಣಿ ಪಕ್ಷಿ ಪ್ರಾಣಿಗಳಿಗೆ ಏಳುವರೆ ಸಾವಿರ ರೂ. ನಿಗದಿಪಡಿಸಲಾಗವುದು ಎಂದು ಅವರು ಮಾಹಿತಿ ನೀಡಿದರು.