ಬೆಳಗಾವಿ: ಶೈಕ್ಷಣಿಕ ಜಿಲ್ಲೆಯಲ್ಲಿ ಕಳ್ಳರ ಹಾವಳಿ ಹೆಚ್ಚಾಗಿದೆ. ಆದರೆ ಕಳ್ಳರೆಂದು ತಪ್ಪಾಗಿ ಭಾವಿಸಿ ಮೂರು ಜನ ಯುವಕರನ್ನು ವಿದ್ಯುತ್ ಕಂಬಕ್ಕೆ ಕಟ್ಟಿ ಗ್ರಾಮಸ್ಥರು ಹಲ್ಲೆ ಮಾಡಿರುವ ಘಟನೆಯೊಂದು ಬೆಳಕಿಗೆ ಬಂದಿದೆ. ಚಿಕ್ಕೋಡಿ ತಾಲೂಕಿನ ಜೋಡಕುರಳಿ ಗ್ರಾಮದಲ್ಲಿ ಕಳ್ಳರೆಂದು ಭಾವಿಸಿ ಮೂವರು ಯುವಕರನ್ನು ಕಂಬಕ್ಕೆ ಕಟ್ಟಿ ಮನಬಂದಂತೆ ಹಲ್ಲೆ ನಡೆಸಿದ್ದಾರೆ. ಬೆಳ್ಳಂಬೆಳಗ್ಗೆ ಜೋಡಕುರಳಿ ಗ್ರಾಮಕ್ಕೆ ನಾಲ್ವರು ಯುವಕರು ಬಂದಿದ್ದರು. ಈ ವೇಳೆ ಯುವಕರನ್ನು ಯಾರು ಎಂದು ವಿಚಾರಿಸುತ್ತಿದ್ದಾಗ ಸರಿಯಾಗಿ ಮಾಹಿತಿ ನೀಡಿದೇ ಯುವಕನೊಬ್ಬ ಓಡಿ ಹೋಗಿದ್ದಾನೆ.
ಇದನ್ನು ನೋಡಿದ ಗ್ರಾಮಸ್ಥರು ಮೂವರನ್ನು ಹಿಡಿದು ಕಂಬಕ್ಕೆ ಕಟ್ಟಿ ಮನಬಂದಂತೆ ಹಲ್ಲೆ ನಡೆಸಿದ್ದಾರೆ. ಕಟ್ಟಿಗೆಯಿಂದ ಹೊಡೆದು, ಮುಖಕ್ಕೆ ಕಾಲಿನಿಂದ ಒದೆಯುತ್ತಾ ಮನಬಂದಂತೆ ಥಳಿಸಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಚಿಕ್ಕೋಡಿ ಪೊಲೀಸರು ದೌಡಾಯಿಸಿದ್ದರು. ಬಳಿಕ ಮೂವರು ಯುವಕರ ರಕ್ಷಣೆ ಮಾಡಿ ಬಿಡುಗಡೆಗೊಳಿಸಿದ್ದಾರೆ. ಹಲ್ಲೆಗೊಳಗಾದ ಮೂವರು ಯುವಕರು ರಾಯಬಾಗ ತಾಲೂಕಿನ ಕೆಂಪಟ್ಟಿ ಗ್ರಾಮದವರೆಂಬ ಮಾಹಿತಿ ಲಭ್ಯವಾಗಿದೆ. ಯುವಕರ ಮೇಲೆ ಹಲ್ಲೆ ಮಾಡಿದ ಹತ್ತಕ್ಕೂ ಹೆಚ್ಚು ಜನರ ವಿರುದ್ಧ ಚಿಕ್ಕೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಓದಿ: ಬೆಂಗಳೂರು: ಬೊಗಳಿದ ನಾಯಿಯ ಮಾಲೀಕನೆಂದು ಭಾವಿಸಿ ವ್ಯಕ್ತಿಗೆ ಚಾಕುವಿನಿಂದ ಹಲ್ಲೆ.. ಆರೋಪಿ ಬಂಧನ
ಮಹಿಳೆ ಮೇಲೆ ಅಮಾನುಷ ಹಲ್ಲೆ: ಕೊಟ್ಟ ಹಣ ವಾಪಸ್ ಕೇಳಿದ್ದಕ್ಕೆ ಮಹಿಳೆಯನ್ನು ಕ್ರೂರವಾಗಿ ಥಳಿಸಿದ ಘಟನೆ ಮಹಾರಾಷ್ಟ್ರ ರಾಜ್ಯದ ಸತಾರ ಜಿಲ್ಲೆಯ ಮಾನ್ ತಾಲೂಕಿನ ಪನ್ವಾನ್ ಗ್ರಾಮದಲ್ಲಿ ನಡೆದಿದೆ. ನಾಲ್ವರು ದುಷ್ಕರ್ಮಿಗಳು ಬೆತ್ತದಿಂದ ಮಹಿಳೆಯನ್ನು ಅಮಾನುಷವಾಗಿ ಥಳಿಸಿದ್ದಾರೆ. ಅಷ್ಟೇ ಅಲ್ಲ ಕಾಲಿನಿಂದ ಒದ್ದಿರುವ ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
ಈ ಸಂಬಂಧ ಮಾಸ್ವಾಡ್ ಪೊಲೀಸ್ ಠಾಣೆಯಲ್ಲಿ ಜಾತಿ ನಿಂದನೆ ಹಾಗೂ ಕೊಲೆ ಯತ್ನ ಪ್ರಕರಣ ದಾಖಲಾಗಿದೆ. ಪ್ರಕರಣದಲ್ಲಿ ದೇವದಾಸ್ ನಾರ್ಲೆ ಹಾಗೂ ಪಿಂಟು ನಾರ್ಲೆ ಎಂಬ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಸಂತೋಷ ನಾರ್ಲೆ ಹಾಗೂ ಜಾನಪ್ಪ ಶಿಂಧೆ ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ.
ಸಂತ್ರಸ್ತ ಮಹಿಳೆ ಗಂಭೀರವಾಗಿ ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಮಾಸ್ವಾಡ್ನ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿದೆ. ಈ ಬಗ್ಗೆ ಸತಾರಾ ಪೊಲೀಸ್ ವರಿಷ್ಠಾಧಿಕಾರಿ ಸಮೀರ್ ಶೇಖ್ ಪ್ರತಿಕ್ರಿಯಿಸಿದ್ದಾರೆ. ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ತಲೆಮರೆಸಿಕೊಂಡಿರುವ ಆರೋಪಿಗಳಿಗಾಗಿ ಪೊಲೀಸ್ ತಂಡ ರಚಿಸಲಾಗಿದೆ ಎಂದು ತಿಳಿಸಿದ್ದಾರೆ.