ಬೆಳಗಾವಿ : ನಿತ್ಯ ಲಕ್ಷಾಂತರ ರೂಪಾಯಿ ಪೆಟ್ರೋಲ್ ಬಂಕ್ ಮಾಲೀಕನ ಅಕೌಂಟ್ಗೆ ಜಮಾವಣೆ ಆಗ್ತಿತ್ತು. ಇತ್ತ ಲೆಕ್ಕಕ್ಕೆ ಲೆಕ್ಕವೂ ಇರ್ತಿತ್ತು. ಆದರೆ, ಪಂಪ್ನ ಮಾಲೀಕ ಮಾತ್ರ ಲಾಸ್ ಅನುಭವಿಸುತ್ತಿದ್ದ. ಒಂದೂವರೆ ವರ್ಷದ ಬಳಿಕ ಬಂಕ್ ಮಾಲೀಕ ತನಗೆ ಆಗ್ತಿರುವ ಹಾನಿ ಕುರಿತು ಠಾಣೆ ಮೇಟ್ಟಿಲೇರಿದ್ದ. ಈ ವೇಳೆ ಸಿಕ್ಕಿದ್ದೇ ಅದೊಬ್ಬ ಖದೀಮನ ಫೋನ್ ಪೇ ಗಿಮಿಕ್ ವಂಚನೆ. ಅಷ್ಟಕ್ಕೂ ಬಂಕ್ ಮಾಲೀಕ ವಂಚನೆಗೆ ಒಳಗಾಗಿದ್ದು ಹೇಗೆ ಪೊಲೀಸ್ ತನಿಖೆಯಲ್ಲಿ ಬಯಲಾದ ಸತ್ಯ ನೋಡಿ.
ನಗರದ ಮಚ್ಚೆಯಲ್ಲಿರುವ ಸೋಮನಾಥ್ ಪೆಟ್ರೋಲ್ ಬಂಕ್ನ ಮಾಲೀಕ ಸುನೀಲ್ ಶಿಂಧೆ ಮೋಸ ಹೋದ ಮಾಲೀಕ. ರೋಹಿತ್ ರಾಜು ಮೋಸ ಮಾಡಿದಾತ. ಈತ ಕಳೆದ ಮೂರು ವರ್ಷದಿಂದ ಸುನೀಲ್ ಬಂಕ್ನಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ. ಖದೀಮ ಒಂದು ವರ್ಷದಲ್ಲಿ ಮಾಲೀಕನಿಗೆ ಬರೋಬ್ಬರಿ 44 ಲಕ್ಷ ರೂ.ಗಳನ್ನು ವಂಚಿಸಿದ್ದಾನೆ ಎಂದು ತಿಳಿದು ಬಂದಿದೆ.
ಫೋನ್ ಪೇ ಅಸ್ತ್ರ: ಇತ್ತಿಚೀನ ದಿನಗಳಲ್ಲಿ ಹೆಚ್ಚಾಗಿ ವಾಹನ ಸವಾರರು ಪೆಟ್ರೋಲ್ ಬಂಕ್ಗಳಲ್ಲಿ ಫೋನ್ ಪೇ, ಗೂಗಲ್ ಪೇ ಮೂಲಕ ಜನ ಪೇಮೆಂಟ್ ಮಾಡ್ತಿದ್ದಾರೆ. ವ್ಯಾಪಾರಸ್ಥರಿಗೆ ಮಾತ್ರ ಈ ಫೋನ್ ಪೇ ಆ್ಯಪ್ನವರು ಹಣ ಮರು ಪಾವತಿಗೆ ವ್ಯವಸ್ಥೆ ಮಾಡಿದ್ದಾರೆ. ಕೆಲವೊಮ್ಮೆ ವಾಹನ ಸವಾರರು ನೂರು ರೂಪಾಯಿ ಪೆಟ್ರೋಲ್ ಹಾಕಿಸಿಕೊಂಡು ಸಾವಿರ ರೂಪಾಯಿ ಫೋನ್ ಪೇ ಮಾಡ್ತಾರೆ. ಆಗ ಅವರಿಗೆ ಹಣ ಹಿಂತಿರುಗಿಸಬೇಕಾಗುತ್ತದೆ.
ಈ ವೇಳೆ, ಕ್ಯಾಶ್ ಕೊಡಲು ಬರುವುದಿಲ್ಲ. ಆಗ ಫೋನ್ ಪೇದಲ್ಲೇ ಈ ರಿಫಂಡ್ ಆಪ್ಷನ್ ಬಳಸಿಕೊಂಡು ಉಳಿದ ಹಣ ಮರಳಿಸಬಹುದು. ಇದೇ ಮಾರ್ಗವನ್ನು ಬಳಸಿಕೊಂಡ ಖದೀಮ ನಿತ್ಯವೂ ತನ್ನ ನಂಬರ್ನಿಂದ ಪಂಪ್ ನಂಬರ್ಗೆ ಎಂಟು ಸಾವಿರ ರೂ. ಫೋನ್ ಪೇ ಮಾಡುತ್ತಿದ್ದ. ಹೀಗೆ ಮಾಡಿ ಮಾಲೀಕನಿಗೆ ಲೆಕ್ಕವನ್ನೂ ಕೊಡುತ್ತಿದ್ದ. ಇದಾದ ಬಳಿಕ ರಾತ್ರಿ ಮನೆಗೆ ವಾಪಸ್ ಆಗುವಾಗ ಪಂಪ್ ನಂಬರ್ನಿಂದ ಮತ್ತೆ ತನ್ನ ಅಕೌಂಟ್ಗೆ ತಾನು ಹಾಕಿದ ಹಣವನ್ನು ರಿಫಂಡ್ ಮಾಡಿಕೊಳ್ಳುತ್ತಿದ್ದ.
44 ಲಕ್ಷ ಹಣ ಎಗರಿಸಿದ ಖದೀಮ: ಹೀಗೆ ರಿಫಂಡ್ ಆದ ಹಣದ ಮೇಸೆಜ್ ಅನ್ನು ಕೂಡಲೇ ಡಿಲಿಟ್ ಮಾಡಿ ತೆರಳುತ್ತಿದ್ದ. ದಿನಕ್ಕೆ 200 ರಿಂದ 300 ಜನ ಫೋನ್ ಪೇಯಿಂದ ಹಣ ವರ್ಗಾವಣೆ ಮಾಡುತ್ತಿದ್ದು, ಯಾರಿಗೆ ರಿಫಂಡ್ ಆಗಿದೆ ಅನ್ನೋದನ್ನು ಮಾಲೀಕ ನೋಡಲು ಹೋಗುತ್ತಿರಲಿಲ್ಲ. ಇದನ್ನು ಬಳಸಿಕೊಂಡು ಸಿಬ್ಬಂದಿ ರೋಹಿತ್ ಒಂದೂವರೆ ವರ್ಷದಲ್ಲಿ 44 ಲಕ್ಷ ರೂ. ಎಗರಿಸಿದ್ದಾನೆ.
ಠಾಣೆ ಮೆಟ್ಟಿಲೇರಿದಾಗ ಸತ್ಯ ಬಯಲು: ದಿನೇ ದಿನೆ ಲಾಸ್ ಆಗುವ ಕಾರಣಕ್ಕೆ ಕಂಗಾಲಾದ ಮಾಲೀಕ ಕೊನೆಗೆ ಬೆಳಗಾವಿಯ ಸಿಇಎನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ತನಿಖೆ ವೇಳೆ ಬ್ಯಾಂಕ್ನ ವಹಿವಾಟು ನೋಡಿದಾಗ ಬಂಕ್ ಸಿಬ್ಬಂದಿ ರೋಹಿತ್ ನಂಬರ್ಗೆ ನಿತ್ಯವೂ ಹಣ ರಿಫಂಡ್ ಆಗುವುದು ಗೊತ್ತಾಗಿದೆ. ಪೊಲೀಸರು ಆರೋಪಿಯನ್ನು ವಿಚಾರಿಸಿದಾಗ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ. ಆತನಿಂದ 28 ಲಕ್ಷ ಹಣ ವಸೂಲಿ ಮಾಡಿದ್ದು, ಇನ್ನುಳಿದ ಹಣವನ್ನು ವಸೂಲಿ ಮಾಡಿಕೊಡುವುದಾಗಿ ನಗರ ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.
ಇದನ್ನೂ ಓದಿ: ಉಕ್ರೇನ್‌ನಲ್ಲಿರುವ ರಾಜ್ಯದವರನ್ನು ಸುರಕ್ಷಿತವಾಗಿ ಕರೆತರಲು ಎಲ್ಲ ರೀತಿಯ ಕ್ರಮ : ಸಿಎಂ ಬೊಮ್ಮಾಯಿ