ಚಿಕ್ಕೋಡಿ (ಬೆಳಗಾವಿ): ರೋಹಿಣಿ ಮಳೆ ಬೀಳೋಕೆ ಪ್ರಾರಂಭವಾಗಿದೆ. ಮುಂಗಾರು ಬೆಳೆಗಳನ್ನು ಬೆಳೆಯಲು ದಿನಗಣನೆ ಶುರುವಾಗಿದೆ. ಚಿಕ್ಕೋಡಿ ಜಿಲ್ಲೆಯ ಉಪವಿಭಾಗದ ರೈತರೀಗ ಹೊಲದ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ.
ಬಿತ್ತನೆಗೂ ಮೊದಲು ನೆಲ ಹದ ಮಾಡು ಗಡಿ ಭಾಗದ ರೈತರು ಕೆಲಸ ಮುಂದುವರೆಸಿದ್ದಾರೆ. ಲಾಕ್‌ಡೌನ್‌ನಿಂದಾಗಿ ನಾಡಿನ ಜನತೆಯ ದಿನಚರಿ ಬದಲಾದರೂ ನಿಸರ್ಗದ ಮಾರ್ಗಸೂಚಿಯನ್ನೇ ನಂಬಿರುವ ಕೃಷಿ ಕೆಲಸಗಳಿಗೆ ಈಗ ವೇಗ ಬಂದಂತಾಗಿದೆ.
ಕಳೆದ ನಾಲ್ಕೈದು ದಿನಗಳ ಹಿಂದೆ ಸುರಿದ ಉತ್ತಮ ಮಳೆಯ ನಂತರ ಹೊಲದಲ್ಲಿ ರೈತರ ಕೆಲಸಗಳು ಚುರುಕುಗೊಂಡಿವೆ. ಮುಂಗಾರು ಬೆಳೆ ನಂಬಿರುವ ರೈತರು ಈಗಾಗಲೇ ಹೊಲದಲ್ಲಿ ಮೆಕ್ಕೆಜೋಳ, ಜೋಳ, ಹತ್ತಿ, ಶೇಂಗಾ, ಸೋಯಾಬಿನ್, ಹೆಸರು, ಉದ್ದು, ಭತ್ತ, ಅರಿಶಿನ, ತಂಬಾಕು ಸೇರಿದಂತೆ ವಿವಿಧ ಏಕದಳ, ದ್ವಿದಳ ಧಾನ್ಯ, ಎಣ್ಣೆಕಾಳು ಹಾಗೂ ವಾಣಿಜ್ಯ ಬೆಳೆಗಳ ಬಿತ್ತನೆ ಕಾರ್ಯ ಆರಂಭಿಸಿದ್ದಾರೆ.
ಚಿಕ್ಕೋಡಿ, ಹುಕ್ಕೇರಿ, ನಿಪ್ಪಾಣಿ, ಸೇರಿದಂತೆ ಹಲವೆಡೆ ಹೆಚ್ಚಿನ ಪ್ರಮಾಣದಲ್ಲಿ ಮಳೆ ಬಿದ್ದಿದೆ. ಕೆಲ ವರ್ಷಗಳಿಂದ ಮುಂಗಾರು ಮಳೆ ವಿಳಂಬವಾಗಿ ಆರಂಭವಾಗಿದ್ದರಿಂದ ಜೂನ್ ಎರಡನೇ ಅಥವಾ ಮೂರನೇ ವಾರದಲ್ಲಿ ಬಿತ್ತನೆ ಕಾರ್ಯ ಆರಂಭವಾಗುತ್ತಿತ್ತು. ಕಳೆದ ವರ್ಷ ಮುಂಗಾರು ಆರಂಭದಲ್ಲಿ ಉತ್ತಮ ಮಳೆಯಾದರೂ ತದನಂತರ ಪ್ರವಾಹ ಸಂಭವಿಸಿತ್ತು. ಇದರಿಂದಾಗಿ ಜಿಲ್ಲೆಯಲ್ಲಿ ಬೆಳೆಗಳು ಕೊಚ್ಚಿ ಹೋಗಿದ್ದವು. ಆದರೆ, ಈ ಬಾರಿ ಮಳೆಯ ಪ್ರಮಾಣ ಹೆಚ್ಚಾಗಿದ್ದು, ರೈತರು ದೇವರ ಮೇಲೆ ಭಾರ ಹಾಕಿ ಬಿತ್ತನೆ ಕಾರ್ಯಕ್ಕೆ ಮುಂದಾಗಿದ್ದಾರೆ.