ಬೆಳಗಾವಿ: ಜಿಲ್ಲೆಯಲ್ಲಿ ಮಳೆ ಕೊರತೆಯಿಂದ ಎದುರಾಗಿರುವ ತೀವ್ರ ಬರ ಪರಿಸ್ಥಿತಿಯನ್ನು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆಯ ಜಂಟಿ ಕಾರ್ಯದರ್ಶಿ ಅಜಿತ್ ಕುಮಾರ್ ಸಾಹು ನೇತೃತ್ವದ ಐವರು ಅಧಿಕಾರಿಗಳ ತಂಡ ಇಂದು ಪರಿಶೀಲಿಸಿತು. ಇದಕ್ಕೂ ಮುನ್ನ ನಗರದ ಪ್ರವಾಸಿಮಂದಿರದಲ್ಲಿ ಬೆಳಗ್ಗೆ ಅಜಿತ್ ಕುಮಾರ್ ಸಾಹು ತಂಡ ಜಿಲ್ಲಾಧಿಕಾರಿ ಹಾಗೂ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿತು. ನಂತರ ಬರಪೀಡಿತ ಪ್ರದೇಶಗಳಿಗೆ ಭೇಟಿ ನೀಡಿತು.
ಮೊದಲಿಗೆ ಬೈಲಹೊಂಗಲ ತಾಲೂಕಿನ ನೇಸರಗಿ ಬಳಿಯ ನಾಗಪ್ಪ ಹಬಿ ಅವರ ಜಮೀನಿನಲ್ಲಿ ಸೋಯಾಬಿನ್ ಹಾಗೂ ರಾಜು ಹೊಂಗಲ್ ಮತ್ತು ಬಸಪ್ಪ ಕುಂಟಿಗೇರಿ ಅವರ ಜಮೀನಿನಲ್ಲಿ ಕ್ಯಾರೆಟ್ ಬೆಳೆಹಾನಿ ವೀಕ್ಷಿಸಿದರು. "ಎಕರೆಗೆ 52 ಸಾವಿರ ರೂ, ಎರಡು ಎಕರೆಗೆ ಒಂದು ಲಕ್ಷ ರೂ.ಗೂ ಅಧಿಕ ಖರ್ಚು ಮಾಡಲಾಗಿದೆ. ಬೀಜ, ಗೊಬ್ಬರಕ್ಕಾಗಿ ಒಂದು ಎಕರೆಗೆ 25 ಸಾವಿರ ರೂ. ಖರ್ಚಾಗಿದೆ" ಎಂದು ಬಸಪ್ಪ ಕುಂಟಿಗೇರಿ ಅಳಲು ತೋಡಿಕೊಂಡರು. "ನೇಸರಗಿ ಭಾಗದಲ್ಲಿ 295 ಹೆಕ್ಟೇರ್ ಕ್ಯಾರೆಟ್ ಬಿತ್ತನೆ ಮಾಡಲಾಗಿದೆ. ಇಳುವರಿ ಸಂಪೂರ್ಣ ಹಾಳಾಗಿದೆ" ಎಂದು ಜಿಲ್ಲಾಧಿಕಾರಿ ತಿಳಿಸಿದರು.
ರೈತರ ನೋವು: ಪ್ರತಿ ರೈತರು ಐದಾರು ಎಕರೆ ಕ್ಯಾರೆಟ್ ಬಿತ್ತನೆ ಮಾಡಿದ್ದು, ಬೆಳೆ ಹಾನಿಯಾಗಿರುವುದರಿಂದ ಸಂಕಷ್ಟಕ್ಕೆ ಸಿಲುಕಿದ್ದೇವೆ ಎಂದು ರೈತರು ತಮ್ಮ ಸಮಸ್ಯೆ ಹೇಳಿಕೊಂಡರು. ತಜ್ಞರ ತಂಡದ ಮುಖ್ಯಸ್ಥರು ಹಾಗೂ ಸದಸ್ಯರು ಸ್ವತಃ ರೈತರೊಂದಿಗೆ ಚರ್ಚಿಸಿ, ಬೆಳೆಹಾನಿ ಕುರಿತು ಮಾಹಿತಿ ಸಂಗ್ರಹಿಸಿದರು. ಇದಾದ ಬಳಿಕ ಮೀರಪ್ಪ ಹುಕ್ಕೇರಿ ಅವರ ಹನ್ನೆರಡು ಎಕರೆ ಸೋಯಾಬಿನ್ ಬೆಳೆಹಾನಿ ಪರಿಶೀಲಿಸಿದರು. "ಎಕರೆಗೆ ಹತ್ತನ್ನೆರಡು ಎಕರೆ ಇಳುವರಿ ಬರಬೇಕಿತ್ತು. ಮಳೆ ಕೊರತೆಯಿಂದ ಸಂಪೂರ್ಣ ಹಾನಿಯಾಗಿದೆ. ಸ್ವಲ್ಪ ಮಳೆ ಆಗಿರುವುದರಿಂದ ಹಸಿರು ಕಾಣಿಸುತ್ತಿದೆ. ಆದರೆ ಇಳುವರಿ ಇಲ್ಲ" ಎಂದು ರೈತ ಮಹಿಳೆ ಕಮಲವ್ವ ನಡಹಟ್ಟಿ ವಿವರಿಸಿದರು.
ಚಚಡಿಯಲ್ಲಿ ವೀರಭದ್ರಪ್ಪ ಹೊಸಮನಿಯವರ ಒಂದೂವರೆ ಎಕರೆ ಸೂರ್ಯಕಾಂತಿ ಬೆಳೆಹಾನಿ ವೀಕ್ಷಿಸಿದರು. ಈಗಾಗಲೇ 20 ಸಾವಿರ ರೂ ಖರ್ಚು ಮಾಡಲಾಗಿದೆ ಎಂದು ರೈತರು ಅಧಿಕಾರಿಗಳಲ್ಲಿ ಅಳಲು ತೋಡಿಕೊಂಡರು. ಕೇಂದ್ರ ಅಧ್ಯಯನ ತಂಡದ ಮುಖ್ಯಸ್ಥರಾದ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆಯ ಜಂಟಿ ಕಾರ್ಯದರ್ಶಿ ಅಜಿತ್ ಕುಮಾರ್ ಸಾಹು ಅವರು, ಬೆಳೆ ವಿಮೆ ಪಾವತಿ, ಬೀಜ, ಗೊಬ್ಬರ, ಕೃಷಿ ಕೂಲಿಕಾರರ ಖರ್ಚು-ವೆಚ್ಚಗಳ ಬಗ್ಗೆ ಸ್ವತಃ ರೈತರಿಂದ ಮಾಹಿತಿ ಪಡೆದರು.
2.78 ಲಕ್ಷ ಹೆಕ್ಟೇರ್ ಬೆಳೆಹಾನಿ- ಜಿಲ್ಲಾಧಿಕಾರಿ ಮಾಹಿತಿ: "ಜಿಲ್ಲೆಯಲ್ಲಿ ಮಳೆ ಕೊರತೆಯಿಂದ 2.78 ಲಕ್ಷ ಹೆಕ್ಟೇರ್ ಬೆಳೆಹಾನಿಯಾಗಿದೆ. ಈ ಕುರಿತು ಸಮಗ್ರ ಮಾಹಿತಿ ಹಾಗೂ ಛಾಯಾಚಿತ್ರಗಳ ಮೂಲಕ ಪ್ರಾತ್ಯಕ್ಷಿಕೆ ನೀಡಲಾಗಿದೆ. ವಾಸ್ತವದಲ್ಲಿ ಕೃಷಿ ಹಾಗೂ ತೋಟಗಾರಿಕೆ ಸೇರಿದಂತೆ ಒಟ್ಟಾರೆ 2,928 ಕೋಟಿ ರೂಪಾಯಿ ಬೆಳೆಹಾನಿಯಾಗಿದೆ. ಆದರೆ ಎನ್‌ಡಿಆರ್‌ಎಫ್ ಮಾರ್ಗಸೂಚಿ ಪ್ರಕಾರ 332 ಕೋಟಿ ಆಗಲಿದೆ. ಈ ಕುರಿತು ಈಗಾಗಲೇ ಕೇಂದ್ರ ಸರಕಾರಕ್ಕೆ ಮನವಿ ಪತ್ರ ಸಲ್ಲಿಸಲಾಗಿದೆ. ಸೋಯಾಬಿನ್, ಹತ್ತಿ, ಸೂರ್ಯಕಾಂತಿ, ಕ್ಯಾರೆಟ್, ಗೋವಿನಜೋಳ, ಕಬ್ಬು, ಟೊಮ್ಯಾಟೋ, ಬಟಾಣಿ ಸೇರಿದಂತೆ ವಿವಿಧ ಬಗೆಯ ಬೆಳೆಗಳು ಹಾನಿಯಾಗಿದೆ" ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಿಳಿಸಿದರು.
ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆಯ ಜಂಟಿ ಕಾರ್ಯದರ್ಶಿ ಅಜಿತ್ ಕುಮಾರ್ ಸಾಹು ನೇತೃತ್ವದ ತಂಡದಲ್ಲಿ ಎಣ್ಣೆಬೀಜ ಅಭಿವೃದ್ಧಿ ನಿರ್ದೇಶನಾಲಯದ ನಿರ್ದೇಶಕ ಡಾ.ಕೆ.ಪೊನ್ನುಸ್ವಾಮಿ, ಕೇಂದ್ರ ಆರ್ಥಿಕ ವೆಚ್ಚ ಇಲಾಖೆಯ ಸಹಾಯಕ ನಿರ್ದೇಶಕ ಮಹೇಂದ್ರ ಚಂಡೇಲಿಯಾ, ನೀತಿ ಆಯೋಗದ ಸಂಶೋಧನಾ ಅಧಿಕಾರಿ ಶಿವಚರಣ ಮೀನಾ ಹಾಗೂ ಕರ್ನಾಟಕ ರಾಜ್ಯ ಕೃಷಿ ಇಲಾಖೆಯ ಆಯುಕ್ತ ವೈ.ಎಸ್.ಪಾಟೀಲ ಇದ್ದರು.
ಬೈಲಹೊಂಗಲ ತಾಲೂಕಿನ ನೇಸರಗಿ, ಕಲಕುಪ್ಪಿ, ಸವದತ್ತಿ ತಾಲೂಕಿನ ಚಚಡಿ, ಹಲಕಿ, ಯರಗಟ್ಟಿ ತಾಲೂಕಿನ ಬೂದಿಗೊಪ್ಪ, ಯರಗಣವಿ, ರಾಮದುರ್ಗ ತಾಲೂಕಿನ ಕೆ.ಚಂದರಗಿ, ಬೂದನೂರ/ಸಾಲಹಳ್ಳಿ ಮತ್ತಿತರ ಗ್ರಾಮದ ವ್ಯಾಪ್ತಿ ಕೇಂದ್ರ ಅಧ್ಯಯನ ತಂಡ ಭೇಟಿ ನೀಡಿ ಬೆಳೆಹಾನಿ ಪರಿಶೀಲಿಸಿತು.
ಜಿ.ಪಂ.ಸಿಇಒ ಹರ್ಷಲ್ ಭೋಯರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ್ ಗುಳೇದ್, ಕೃಷಿ ಇಲಾಖೆಯ ಹಿರಿಯ ಅಧಿಕಾರಿ ಡಾ.ವಿ.ಜೆ.ಪಾಟೀಲ, ಅಪರ ಜಿಲ್ಲಾಧಿಕಾರಿ ವಿಜಯಕುಮಾರ್ ಹೊನಕೇರಿ, ಉಪ ವಿಭಾಗಾಧಿಕಾರಿ ಶ್ರವಣ್ ನಾಯಕ, ಬೆಳಗಾವಿ ಜಿಲ್ಲೆಯ ಜಂಟಿ ನಿರ್ದೇಶಕ ಶಿವನಗೌಡ ಪಾಟೀಲ, ಉಪ ನಿರ್ದೇಶಕ ಡಾ.ಎಚ್.ಡಿ.ಕೋಳೇಕರ್, ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕ ಮಹಾಂತೇಶ ಮುರಗೋಡ ಇದ್ದರು.
ಇದನ್ನೂಓದಿ: ಬೆಳಗಾವಿ: ಕೇಂದ್ರ ಬರ ಅಧ್ಯಯನ ತಂಡದ ಎದುರು ಆತ್ಮಹತ್ಯೆಗೆ ಯತ್ನಿಸಿದ ರೈತ