ಬೆಳಗಾವಿ: ಕಳೆದ ಎರಡು ವರ್ಷಗಳ ಹಿಂದಷ್ಟೇ ಅವ್ಯವಸ್ಥೆ ಸೇರಿ ಸದಾ ಒಂದಿಲ್ಲೊಂದು ವಿವಾದಗಳಿಂದ ಸುದ್ದಿಯಾಗುತ್ತಿದ್ದ ಬೆಳಗಾವಿ ಬಿಮ್ಸ್ ಇದೀಗ ಉತ್ತಮ ಮೂಲಸೌಕರ್ಯ, ಆಡಳಿತ ಹಾಗೂ ರೋಗಿಗಳಿಗೆ ಉತ್ತಮ ಸೌಲಭ್ಯ ಒದಗಿಸಿದ್ದಕ್ಕಾಗಿ ದೇಶದ 270ಕ್ಕೂ ಅಧಿಕ ಸರ್ಕಾರಿ ಆಸ್ಪತ್ರೆಗಳ ಪೈಕಿ 12ನೇ ಸ್ಥಾನ ಪಡೆದುಕೊಂಡಿದೆ. ರಾಜ್ಯದಲ್ಲಿ ಪ್ರಥಮ ಸ್ಥಾನಕ್ಕೆ ಪಾತ್ರವಾಗಿದೆ.
ಬೆಳಗಾವಿ ವೈದ್ಯಕೀಯ ವಿಜ್ಞಾನ ಸಂಸ್ಥೆ (ಜಿಲ್ಲಾಸ್ಪತ್ರೆ) ಕೋವಿಡ್ ಸೇರಿದಂತೆ ಇತರ ಸಂದರ್ಭದಲ್ಲಿ ಅವ್ಯವಸ್ಥೆ ಬಗ್ಗೆ ಸಾಕಷ್ಟು ಟೀಕೆಗೆ ಗುರಿಯಾಗುತ್ತಿತ್ತು. ಆದರೀಗ ಹದಗೆಟ್ಟ ವ್ಯವಸ್ಥೆಯನ್ನೇ ನಿರೀಕ್ಷೆಗೂ ಮೀರಿದ ವೇಗದಲ್ಲಿ ಸರಿಪಡಿಸಿಕೊಂಡ ಶ್ರೇಯಸ್ಸು ಬಿಮ್ಸ್ ಗೆ ಸಿಕ್ಕಿದೆ.
ವೈದ್ಯಕೀಯ ಸಂಸ್ಥೆ ಬಿಮ್ಸ್ ಗೆ ಕರ್ನಾಟಕದಲ್ಲಿ ಮೊದಲ ಸ್ಥಾನ: ಜುಲೈ 2022ರಲ್ಲಿ ಪ್ರಕಟವಾದ ಔಟ್ ಲುಕ್ ಮ್ಯಾಗಜಿನ್ ಹೊರಡಿಸಿದ ಐಕೇರ್ ದೇಶದ ಸರ್ಕಾರಿ ವೈದ್ಯಕೀಯ ಸಂಸ್ಥೆಗಳ ರ್ಯಾಂಕಿಂಗ್ನಲ್ಲಿ ಬಿಮ್ಸ್‌ಗೆ ರಾಜ್ಯದಲ್ಲಿ ಪ್ರಥಮ ಸ್ಥಾನ ಸಿಕ್ಕಿದ್ದರೆ, ದೇಶದಲ್ಲಿ 12ನೇ ಸ್ಥಾನ ಒದಗಿದೆ. ಔಟ್ ಲುಕ್ ನೀಡಿರುವ ರ‍್ಯಾಂಕಿಂಗ್ ಅನ್ವಯ ಬಿಮ್ಸ್‌ಗೆ ಶೈಕ್ಷಣಿಕ ಮಟ್ಟದಲ್ಲಿ ಏಂಟನೇ ಸ್ಥಾನ, ಮೂಲಭೂತ ಸೌಕರ್ಯಗಳಲ್ಲಿ 5ನೇ ಸ್ಥಾನ, ಆಡಳಿತ ಹಾಗೂ ಪ್ರವೇಶಾತಿಯಲ್ಲಿ 12ನೇ ಸ್ಥಾನ ಪಡೆದುಕೊಂಡಿದೆ.
ರ‍್ಯಾಂಕಿಂಗ್ ಮಾನದಂಡಗಳೇನು..? ದೇಶಾದ್ಯಂತ ಇರುವ ಸರ್ಕಾರಿ ವೈದ್ಯಕೀಯ ಸಂಸ್ಥೆಗಳಲ್ಲಿ ಅಲ್ಲಿ ನೀಡುವ ಸೇವೆ, ಪ್ರವೇಶ, ಮೂಲಸೌಕರ್ಯ, ಆಡಳಿತ ವ್ಯವಸ್ಥೆ ಸೇರಿದಂತೆ ಹಲವು ಅಂಶಗಳನ್ನಿಟ್ಟುಕೊಂಡು ಇಂಡಿಯನ್ ಸೆಂಟರ್ ಫಾರ್ ಅಕಾಡೆಮಿಕ್ ರ‍್ಯಾಂಕಿಂಗ್ ಆ್ಯಂಡ್ ಎಕ್ಸಲೆನ್ಸ್ (ಐಸಿಎಆರ್‌ಇ ) ಮತ್ತು ಖಾಸಗಿ ನಿಯತಕಾಲಿಕೆ ಔಟ್ಲುಕ್ ಜಂಟಿಯಾಗಿ ಸಮೀಕ್ಷೆ ಕೈಗೊಂಡಿದ್ದವು. ದೆಹಲಿಯ ಏಮ್ಸ್ ಗೆ ಮೊದಲ ಸ್ಥಾನ, ವಾರಾಣಸಿಯ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಬನಾರಸ್ ಹಿಂದೂ ವಿವಿಗೆ 2ನೇ ಸ್ಥಾನ ಸಿಕ್ಕಿದೆ. ಅದರಲ್ಲಿ ಪ್ರಮುಖವಾಗಿ ಐಸಿಎಆರ್‌ಇನಿಂದ ಬಿಮ್ಸ್‌ಗೆ 540 ಅಂಕ ನೀಡಲಾಗಿದೆ.
ಐಸಿಎಆರ್‌ಇ 5 ವಿಭಾಗಗಳಲ್ಲಿ ಒಟ್ಟು 1000 ಅಂಕಗಳನ್ನು ನಿಗದಿ ಮಾಡಿದ್ದು ಬಿಮ್ಸ್ 540.34 ಪಡೆದುಕೊಂಡಿದೆ. ಅಕಾಡೆಮಿಕ್ ಆ್ಯಂಡ್ ರಿಸರ್ಚ್ ಎಕ್ಸಲೆನ್ಸ್‌ನಲ್ಲಿ 300ರಲ್ಲಿ 226.64, ಇಂಡಸ್ಟ್ರಿ ಇಂಟರ್‌ಫೇಸ್ ಆ್ಯಂಡ್ ಪ್ಲೇಸ್‌ಮೆಂಟ್‌ನಲ್ಲಿ 200/28.82, ಇನ್‌ಫ್ರಾಸ್ಟಕ್ಟರ್ ಆ್ಯಂಡ್ ಫ್ಯಾಸಿಲಿಟಿಸ್‌ನಲ್ಲಿ 200ಕ್ಕೆ 182.28, ಗವರ್ನನ್ಸ್ ಆ್ಯಂಡ್ ಆಡ್ಮಿಷನ್ಸ್‌ನಲ್ಲಿ 150ಕ್ಕೆ 71.66 ಹಾಗೂ ಔಟ್‌ರೀಚ್‌ನಲ್ಲಿ 150ರಲ್ಲಿ 30.83 ಅಂಕ ನೀಡಿದೆ.
ಇದನ್ನೂ ಓದಿ: ಭಾರತದಲ್ಲಿ 20 ಸಾವಿರ ಗಡಿ ದಾಟಿದ ಕೋವಿಡ್, ಸಕ್ರಿಯ ಪ್ರಕರಣಗಳು ದಿಢೀರ್ ಏರಿಕೆ