ಬೆಳಗಾವಿ : ರಾಜ್ಯದಲ್ಲಿ ಜನತಾ ಪರಿವಾರದ ಕಾಲದಿಂದಲೂ ಭೋಜನ ಕೂಟದ ವ್ಯವಸ್ಥೆ ಇದೆ. ಈ ಭೋಜನಕೂಟ ಬೆಳಗಾವಿ ಜಿಲ್ಲೆಯಲ್ಲಿ ಫೇಮಸ್ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಮಾಹಿತಿ ನೀಡಿದರು.
ಹಿರಿಯ ಶಾಸಕ ಉಮೇಶ ಕತ್ತಿ ಭೋಜನಕೂಟ ವಿಚಾರಕ್ಕೆ ಸಂಬಂಧಿಸಿದಂತೆ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ಭೋಜನಕೂಟ ಪದ್ಧತಿ ಹಲವು ವರ್ಷಗಳಿಂದ ಜಾರಿಯಲ್ಲಿದೆ. ಇಲ್ಲಿನ ರಾಜಕೀಯ ಬೆಳವಣಿಗೆ ಬಗ್ಗೆ ಓರ್ವ ವಿದ್ಯಾರ್ಥಿಯಾಗಿ ಕಲಿಯುತ್ತಿದ್ದೇನೆ. ಬಿಜೆಪಿಯಲ್ಲಿ ಯಾವುದೇ ಗುಂಪುಗಳು ಇಲ್ಲ. ಸತೀಶ್ ಜಾರಕಿಹೊಳಿ ಕಾಂಗ್ರೆಸ್ ನಲ್ಲಿ ಎಷ್ಟು ಗುಂಪು ಇದೆ ಅಂತ ಮೊದಲು ನೋಡಲಿ ಎಂದು ವ್ಯಂಗ್ಯವಾಡಿದರು.
ಜೊತೆಗೆ ಇದೇ ಸಂದರ್ಭದಲ್ಲಿ ಜಗದೀಶ್ ಶೆಟ್ಟರ್ ಅವರನ್ನು ಸಿಎಂ ಮಾಡುವ ಪ್ರಯತ್ನಗಳೆಲ್ಲವೂ ಶೇಖ್ ಮೊಹಮ್ಮದ್ ಲೆಕ್ಕಾಚಾರದಂತೆ ಎಂದು ಟೀಕಾಕಾರರಿಗೆ ತಿರುಗೇಟು ನೀಡಿದರು.
ನಿಪ್ಪಾಣಿ ಭಾಗದಲ್ಲಿ ಕಳ್ಳದಾರಿ ಮೂಲಕ ಪ್ರವೇಶ ತಡೆಯಲು ಹೆಚ್ಚಿನ ಚೆಕ್ ಪೋಸ್ಟ್ ನಿರ್ಮಾಣ ಮಾಡಲು ಸೂಚನೆ ನೀಡಿದ್ದೇನೆ. ತಾಲೂಕು, ಜಿಲ್ಲಾ ಚೆಕ್ ಪೋಸ್ಟ್ ಗಳನ್ನು ಗಡಿ ಭಾಗಕ್ಕೆ ಶಿಫ್ಟ್ ಮಾಡಲು ಸೂಚನೆ ಕೊಟ್ಟಿದ್ದೇನೆ. ಲಾಕ್ಡೌನ್ ಮುಗಿದ ಬಳಿಕ ಗಡಿಯಲ್ಲಿ ಹೆಚ್ಚಿನ ವಾಹನ ಓಡಾಟ ಆರಂಭವಾಗಿದೆ. ಇದು ಪೊಲೀಸರಿಗೆ ಸವಾಲಾಗಿದೆ. ಕೋವಿಡ್ ಕ್ರೈಂ ನಿಯಂತ್ರಣಕ್ಕೆ ಆದ್ಯತೆ ಕೊಡಲು ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
ಕೆಲವರು ಕಳ್ಳ ಮಾರ್ಗದಲ್ಲಿ ಬಂದಿದ್ದು ನಿಜ. ಆದರೆ ಸದ್ಯ ಕಳ್ಳ ಮಾರ್ಗ ಸಂಪೂರ್ಣ ಬಂದ್ ಆಗಿವೆ. ಕ್ವಾರಂಟೈನ್ ಸೌಲಭ್ಯ ನೋಡಿ ಅಂತಾರಾಜ್ಯ ವಲಸಿಗರಿಗೆ ಪಾಸ್ ಮಂಜೂರು ಮಾಡಲಾಗಿದೆ. ಜೂನ್ 15 ರ ವರೆಗೆ ಮಹಾರಾಷ್ಟ್ರದಿಂದ ಬರುವವರಿಗೆ ಪಾಸ್ ನೀಡುವುದಿಲ್ಲ ಎಂದರು.