ಬೆಳಗಾವಿ: "ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿಗೆ ಆಗ್ರಹಿಸಿ ಮತ್ತೆ ಬೆಳಗಾವಿ ಜಿಲ್ಲೆಯಿಂದಲೇ ಹೋರಾಟ ಆರಂಭಿಸುತ್ತಿದ್ದು, ನಿಪ್ಪಾಣಿಯಿಂದ ಹೋರಾಟ ಪ್ರಾರಂಭವಾಗಲಿದೆ" ಎಂದು ಕೂಡಲಸಂಗಮದ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ತಿಳಿಸಿದರು. ಬೆಳಗಾವಿಯ ಗಾಂಧಿ ಭವನದಲ್ಲಿಂದು ಜಿಲ್ಲಾ ಮಟ್ಟದ ಸಭೆ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಪಂಚಮಸಾಲಿ ಸಮಾಜಕ್ಕೆ ಚುನಾವಣೆ ಪೂರ್ವದಲ್ಲಿ ಬಿಜೆಪಿ ಸರ್ಕಾರ 2ಡಿ ಮೀಸಲಾತಿ ಘೋಷಿಸಿತ್ತು. ಆಗ ಚುನಾವಣೆ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಹೋರಾಟಕ್ಕೆ ನಾವು ಅಲ್ಪ ವಿರಾಮ ನೀಡಿದ್ದೆವು. ಈಗ ಹೊಸ ಸರ್ಕಾರ ರಚನೆಯಾದ ಬಳಿಕ 2ಎಗೆ ಮೀಸಲಾತಿಗೆ ಬೇಡಿಕೆ ಇಟ್ಟಿದ್ದೇವೆ" ಎಂದರು.
"ಈಗಿನ ಮುಖ್ಯಮಂತ್ರಿಗಳಿಗೆ ಮೀಸಲಾತಿ ನೀಡುವಂತೆ ಮನವಿ ಮಾಡಿದ್ದೆವು. ಅಧಿವೇಶನ ಮುಗಿಯುವವರೆಗೂ ಸಿಎಂ ಕಾಲಾವಕಾಶ ಕೇಳಿದ್ದರು. ಅಧಿವೇಶನ ಮುಗಿದು ತಿಂಗಳು ಕಳೆದರೂ ಸಿಎಂ ಸಭೆ ಕರೆದಿಲ್ಲ. ಹೋರಾಟವನ್ನು ಮತ್ತೆ ಶುರು ಮಾಡಿ ಅಂತಾ ಸಮಾಜದ ಜನ ಒತ್ತಾಯಿಸುತ್ತಿದ್ದಾರೆ. ಜೊತೆಗೆ ಲೋಕಸಭಾ ಚುನಾವಣೆ ಎರಡು ಪಕ್ಷಕ್ಕೂ ಬಹಳ ಮುಖ್ಯವಾಗಿದ್ದು, ಹೋರಾಟ ಮಾಡಿ ಗಮನ ಸೆಳೆಯೋಣ ಅಂತಾ ಒತ್ತಡ ಹಾಕುತ್ತಿದ್ದಾರೆ. ಆಗಸ್ಟ್ ಕೊನೆಯ ವಾರದಲ್ಲಿ ಬೀದಿಯಲ್ಲಿ ಕುಳಿತು ಇಷ್ಟಲಿಂಗ ಪೂಜೆ ಮೂಲಕ ಹೋರಾಟ ಶುರು ಮಾಡುತ್ತೇವಿ. ಸರ್ಕಾರದ ಸ್ಪಂದನೆಯ ಮೇಲೆ ಹೋರಾಟದ ರೂಪುರೇಷೆ ಸಿದ್ಧವಾಗುತ್ತದೆ. ಈ ಬಾರಿಯೂ ಬೆಳಗಾವಿ ಜಿಲ್ಲೆಯ ನಿಪ್ಪಾಣಿಯಿಂದ ಹೋರಾಟ ಆರಂಭ ಮಾಡುತ್ತೇವಿ. ದಿನಾಂಕವನ್ನು ಶೀಘ್ರದಲ್ಲಿ ನಿರ್ಧಾರ ಮಾಡುತ್ತೇವೆ" ಎಂದು ತಿಳಿಸಿದರು.
"ಎರಡು ದಿನ ತಾಲೂಕು ಕೇಂದ್ರದಲ್ಲಿ ಸಭೆ ಮಾಡಲಿದ್ದೇವೆ. ಮೂರನೇ ದಿನ ಜಿಲ್ಲಾ ಕೇಂದ್ರದಲ್ಲಿ ಸಭೆ ಮಾಡುತ್ತೇವೆ. ಹೀಗೆ ಇಡೀ ರಾಜ್ಯಾದ್ಯಂತ ಸಭೆ ಮಾಡಿ. ಕೊನೆಯಲ್ಲಿ ಕೂಡಲಸಂಗಮದಲ್ಲಿ ದೊಡ್ಡ ಮಟ್ಟದ ಹಕ್ಕೊತ್ತಾಯ ಸಭೆ ಮಾಡಿ ಸರ್ಕಾರದ ಮೇಲೆ ಒತ್ತಡ ಹಾಕುತ್ತೇವೆ. ಶೀಘ್ರದಲ್ಲಿ ಸಿಎಂ ತಜ್ಞರ ಸಭೆ ಕರೆಯಬೇಕು. ಮೀಸಲಾತಿ ಅನುಷ್ಠಾನ ಆಗುವವರೆಗೂ ಹೋರಾಟ ನಿರಂತರವಾಗಿ ಮುಂದುವರಿಯುತ್ತದೆ" ಎಂದು ಆಗ್ರಹಿಸಿದರು.
"ಕಾಂಗ್ರೆಸ್ ಸರ್ಕಾರದ ಮೇಲೆ ನಮ್ಮ ಋಣಭಾರ ಇದೆ. ಈ ಚುನಾವಣೆಯಲ್ಲಿ ನಿಮ್ಮನ್ನು ಸಮಾಜದ ಜನ ಕೈ ಹಿಡಿದಿದ್ದಾರೆ. ಹಾಗಾಗಿ ಸಮಾಜದ ಋಣ ತೀರಿಸುವ ಕೆಲಸ ಸರ್ಕಾರ ಮಾಡಬೇಕು. ತಡವಾಗಿ ಮೀಸಲಾತಿ ಘೋಷಣೆ ಮಾಡಿದ್ದರಿಂದಲೇ ಬಿಜೆಪಿ ಮೇಲೆ ನಮ್ಮ ಸಮಾಜ ಮುನಿಸಿಕೊಂಡಿತು. ಹಾಗಾಗಿ ಸಮಾಜದ ಬಹಳಷ್ಟು ಜನರು ಕಾಂಗ್ರೆಸ್ ಪರವಾಗಿ ವೋಟ್ ಹಾಕಿದ್ದಾರೆ" ಎಂದರು.
"ಹೋರಾಟ ಶುರು ಮಾಡಿದ ಮೇಲೆ ಎಲ್ಲರೂ ಬರುತ್ತಾರೆ. ಕಾಂಗ್ರೆಸ್ ಸರ್ಕಾರ ರಚನೆ ಆದ ಬಳಿಕವೂ ಹೋರಾಟ ಮಾಡುವ ಪರಿಸ್ಥಿತಿ ಇದೆ. ಯಾವುದೇ ಹೋರಾಟ ಆಗಲಿ ಏಕಾಏಕಿ ಫಲ ಸಿಗುವುದಿಲ್ಲ. ಮೀಸಲಾತಿ ವಿಚಾರ ಇದ್ದಾಗ ಸೂಕ್ಷ್ಮ ಇರುತ್ತದೆ. ಶಾಸಕರು ರಾಜೀನಾಮೆ ಕೊಡುವುದರಿಂದ ಯಾವುದೇ ಸಮಸ್ಯೆ ಬಗೆಹರಿಯುವುದಿಲ್ಲ. ಒಳಗಿದ್ದುಕೊಂಡು ಹೋರಾಟ ಮಾಡಿ ಎಂದು ನಮ್ಮ ಶಾಸಕರಿಗೆ ಕರೆ ನೀಡುತ್ತೇವೆ" ಎಂದು ಸ್ವಾಮೀಜಿ ಹೇಳಿದರು.
ಮಾಜಿ ಸಚಿವ ವಿನಯ ಕುಲಕರ್ಣಿ, ಎ.ಬಿ.ಪಾಟೀಲ, ಶಶಿಕಾಂತ ನಾಯಿಕ, ಮಾಜಿ ಶಾಸಕ ಡಾ. ವಿಶ್ವನಾಥ ಪಾಟೀಲ, ರೋಹಿಣಿ ಪಾಟೀಲ ಸೇರಿ ಮತ್ತಿತರರು ಉಪಸ್ಥಿತರಿದ್ದರು.
ಇದನ್ನೂ ಓದಿ: ಪಕ್ಷದಲ್ಲಿನ ಗೊಂದಲ ನಿವಾರಣೆಗೆ ಶಾಸಕರ ಜೊತೆ ಬಿಎಸ್ವೈ ಮಹತ್ವದ ಸಭೆ