ಬೆಳಗಾವಿ : ಕರ್ನಾಟಕದ ಸಾಂಸ್ಕೃತಿಕ ನಾಯಕನಾಗಿ ವಿಶ್ವಗುರು ಬಸವಣ್ಣ ಅವರನ್ನು ಕರ್ನಾಟಕ ಸರ್ಕಾರ ಘೋಷಣೆ ಮಾಡಿದ ಹಿನ್ನೆಲೆ, ಬೆಳಗಾವಿಯ ರಾಣಿ ಚನ್ನಮ್ಮ ವೃತ್ತದಲ್ಲಿ ಇಂದು ಸಂಜೆ ವಿವಿಧ ಲಿಂಗಾಯತ ಸಂಘಟನೆಗಳ ನೇತೃತ್ವದಲ್ಲಿ ವಿಜಯೋತ್ಸವ ಆಚರಿಸಲಾಯಿತು.
ಜೈ ಬಸವೇಶ ಭಾರತ ದೇಶ, ಒಬ್ಬ ಲಿಂಗಾಯತ ಕೋಟಿ ಲಿಂಗಾಯತ, ಕಟ್ಟುವೆವು ಕಲ್ಯಾಣ ರಾಜ್ಯ ಕಟ್ಟುವೆವು ಘೋಷಣೆ ಮೊಳಗಿಸಿದ ಬಸವ ಭಕ್ತರು, ಪರಸ್ಪರ ಸಿಹಿ ತಿನ್ನಿಸಿ, ಪಟಾಕಿ ಸಿಡಿಸಿ ಸಂಭ್ರಮಿಸಿದರು. ಚಿಕ್ಕ ಮಕ್ಕಳು ಸಹಿತ ಬಸವಣ್ಣನವರ ಭಾವಚಿತ್ರ, ಬಸವಧ್ವಜ ಹಿಡಿದು ವಿಜಯೋತ್ಸವದಲ್ಲಿ ಪಾಲ್ಗೊಂಡಿದ್ದರು.
ಈ ವೇಳೆ ಮಾತನಾಡಿದ ಲಿಂಗಾಯತ ಮುಖಂಡ ಶಂಕರ ಗುಡಸ ಅವರು, ಗುರು ಬಸವಣ್ಣನವರನ್ನು ರಾಜ್ಯದ ಸಾಂಸ್ಕೃತಿಕ ನಾಯಕನಾಗಿ ಘೋಷಿಸಿದ ಕರ್ನಾಟಕ ಸರ್ಕಾರಕ್ಕೆ ಎಲ್ಲ ಲಿಂಗಾಯತ ಸಂಘಟನೆಗಳ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ. ಸುಮಾರು 16 ವರ್ಷಗಳ ಹಿಂದೆ ದ್ವಾರಕಾನಾಥ ಅವರು ಮಾತೆ ಮಹಾದೇವಿ ತಾಯಿ ಅವರಿಗೆ ಈ ವಿಚಾರ ತಿಳಿಸಿದ್ದರು. ಆ ಬಳಿಕ ಮಾತಾಜಿ ಮತ್ತು ವಿವಿಧ ಲಿಂಗಾಯತ ಸಂಘಟನೆಗಳು ಸರ್ಕಾರಕ್ಕೆ ಬೇಡಿಕೆ ಇಟ್ಟಿದ್ದೆವು. ಈಗ ಅದು ಈಡೇರಿದೆ. ಅದೇ ರೀತಿ ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಧರ್ಮದ ಮಾನ್ಯತೆ ನೀಡುವ ನಿಟ್ಟಿನಲ್ಲಿ ಸಿಎಂ ಸಿದ್ದರಾಮಯ್ಯ ಅವರು ಮತ್ತೊಮ್ಮೆ ಕೇಂದ್ರಕ್ಕೆ ವರದಿ ಕಳುಹಿಸಬೇಕು ಎಂದು ಕೇಳಿಕೊಂಡರು.
ಬಸವ ಮಂಟಪದ ಸಂಚಾಲಕ ಪ್ರಭುಲಿಂಗ ಸ್ವಾಮೀಜಿ ಮಾತನಾಡಿ, ವಿಶ್ವಗುರು ಬಸವಣ್ಣನವರು ಜನ ಬದುಕಲಿ, ಜಗ ಬದುಕಲಿ ಎನ್ನುವ ತತ್ವ ಸಿದ್ಧಾಂತ, ವಚನ ಸಾಹಿತ್ಯ ನೀಡಿ, ಅಸ್ಪೃಶ್ಯತೆ ಮತ್ತು ಮೂಢ ನಂಬಿಕೆ ಹೋಗಲಾಡಿಸಿದವರು. ಮಹಾರಾಷ್ಟ್ರದಲ್ಲಿ ಶಿವಾಜಿ ಮಹಾರಾಜರನ್ನು ಅಲ್ಲಿನ ಸಾಂಸ್ಕೃತಿಕ ನಾಯಕನಾಗಿ ಘೋಷಣೆ ಮಾಡಿದಂತೆ, ಕರ್ನಾಟಕದಲ್ಲಿ ಬಸವಣ್ಣನವರನ್ನು ಘೋಷಣೆ ಮಾಡಿರುವುದು ಇಡೀ ಸಮಾಜಕ್ಕೆ ಸಂತಸದ ಸಂಗತಿ ಎಂದು ಹರ್ಷ ವ್ಯಕ್ತಪಡಿಸಿದರು.
ಬಳಿಕ ಗೋವಾವ್ಹೇಸ್ ನಲ್ಲಿರುವ ಬಸವೇಶ್ವರ ವೃತ್ತದಲ್ಲಿರುವ ಗುರು ಬಸವಣ್ಣನವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ, ಗೌರವ ಸಲ್ಲಿಸಲಾಯಿತು. ಈ ವೇಳೆ ಅಶೋಕ ಬೆಂಡಿಗೇರಿ, ಆನಂದ ಗುಡಸ, ಕೆ. ಶರಣಪ್ರಸಾದ, ದೀಪಕ ಗುಡಗನಟ್ಟಿ, ಶಿವಾನಂದ ತಂಬಾಕಿ, ಮಹಾಂತೇಶ ಗುಡಸ ಸೇರಿ ಮತ್ತಿತರರು ಇದ್ದರು.
ಬಸವಣ್ಣನನ್ನು 'ಸಾಂಸ್ಕೃತಿಕ ನಾಯಕ' ಎಂದು ಘೋಷಿಸಲು ಕೂಡಲಸಂಗಮ ಪಂಚಮಸಾಲಿ ಪೀಠದ ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿ ಸಿಎಂ ಸಿದ್ದರಾಮಯ್ಯಗೆ (ಜನವರಿ 11-24) ಆಗ್ರಹಿಸಿದ್ದರು.
ನಗರದಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ್ದ ಅವರು, "ಈಗಾಗಲೇ ಎಲ್ಲಾ ರಾಜ್ಯದಲ್ಲಿ ಆಯಾ ದಾರ್ಶನಿಕರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡಲಾಗಿದೆ. ಆದ್ದರಿಂದ ಕರ್ನಾಟಕದಲ್ಲಿ ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಿಸಲಿ. ಮುಖ್ಯಮಂತ್ರಿಗಳಿಗೆ ಈ ವಿಚಾರವಾಗಿ ಒತ್ತಾಯಿಸಲು ಬೆಂಗಳೂರಿಗೆ ಸಾಕಷ್ಟು ಲಿಂಗಾಯತ ಮಠಾಧೀಶರು ತೆರಳಿದ್ದರು. ನಾನು ಕೂಡ ಹೋಗ್ಬೇಕಾಗಿತ್ತು. ಆದರೆ ಕಾರಣಾಂತರಗಳಿಂದ ಹೋಗಲು ಸಾಧ್ಯವಾಗಿಲ್ಲ" ಎಂದಿದ್ದರು.
ಇದನ್ನೂ ಓದಿ: ಬಸವಣ್ಣನನ್ನು 'ಸಾಂಸ್ಕೃತಿಕ ನಾಯಕ' ಎಂದು ಘೋಷಿಸಿ: ಜಯಮೃತ್ಯುಂಜಯ ಶ್ರೀ