ಚಿಕ್ಕೋಡಿ(ಬೆಳಗಾವಿ): ಡಿಸಿಎಂ ಡಿ ಕೆ ಶಿವಕುಮಾರ್ ಬಿಜೆಪಿ ನಾಯಕರನ್ನು ಭೇಟಿ ಮಾಡಿ ನಮ್ಮ ಕಾರ್ಯಕರ್ತರ ಆತ್ಮಸ್ಥೈರ್ಯ ಕುಂದಿಸುವ ಕುತಂತ್ರ ಮಾಡುತ್ತಿದ್ದಾರೆ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಅವರು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಭಾನುವಾರ ಚಿಕ್ಕೋಡಿಯಲ್ಲಿ ಬಿಜೆಪಿ ಕಾರ್ಯಕರ್ತರ ಸಮಾವೇಶದಲ್ಲಿ ಭಾಗವಹಿಸಿ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಮ್ಮ ಬಿಜೆಪಿ ಕಾರ್ಯಕರ್ತರಲ್ಲಿ ನೈತಿಕ ಸ್ಥೈರ್ಯ ಕುಂದಿಸುವ ಉದ್ದೇಶದಿಂದ ವ್ಯವಸ್ಥಿತವಾಗಿ ಡಿಕೆಶಿ ಇಂತಹ ಆಟ ಆಡುತ್ತಿದ್ದಾರೆ ಎಂದು ಆರೋಪಿಸಿದರು.
ಇದರಿಂದ ನಮ್ಮ ಕಾರ್ಯಕರ್ತರ ಮನೋಬಲ ಕುಸಿಯುತ್ತದೆ. ನಮ್ಮ ಕಾರ್ಯಕರ್ತರು ಹಿಂದುತ್ವದ ಪರವಾಗಿ ಪ್ರಾಣದ ಹಂಗು ತೊರೆದು ಕೆಲಸ ಮಾಡುತ್ತಿದ್ದಾರೆ. ನಾಯಕರು ಈ ರೀತಿ ಭೇಟಿಯಾದರೆ, ನಾಯಕರು ಒಂದಾಗಿದ್ದಾರೆ ನಾವ್ಯಾಕೆ ಕೆಟ್ಟಾಗಬೇಕೆಂಬ ತಪ್ಪು ಕಲ್ಪನೆ ಅವರಿಗೆ ಬರಬಾರರು. ನಮ್ಮ ಕಾರ್ಯಕರ್ತರಿಗೆ ನೈತಿಕ ಸ್ಥೈರ್ಯ ತುಂಬಬೇಕಾದ್ರೆ ಇಂತಹ ಭೇಟಿಗಳ ಅವಶ್ಯಕತೆ ಇಲ್ಲಾ. ಭೇಟಿ ಆಗಲೇಬೇಕು ಅಂದ್ರೆ ವಿಧಾನಸೌದ ಇದ್ದೇ ಇದೆ ಅಲ್ಲಿ ಭೇಟಿ ಆಗಲಿ ಎಂದರು.
ಸಿದ್ದರಾಮಯ್ಯ ಯಾವುದೇ ವಿರೋಧ ಪಕ್ಷದ ನಾಯಕರಿಗೆ ಫೋನ್ ಮಾಡಲ್ಲಾ, ಭೇಟಿ ಆಗಲ್ಲಾ ಅಂತಾ ಹೇಳಿದ್ದಾರೆ. ನಾವ್ಯಾಕೆ ಭೇಟಿ ಆಗಬೇಕು ನಾವು ಏನೆ ಇದ್ದರೂ ನಮ್ಮ ಕಾರ್ಯಕರ್ತರೊಟ್ಟಿಗೆ ಭೇಟಿ ಮಾಡಬೇಕು ನಮ್ಮ ಯಾವುದೇ ನಾಯಕರ ಮಧ್ಯೆ ಭಿನ್ನಾಭಿಪ್ರಾಯ ಇಲ್ಲಾ. ಬೊಮ್ಮಾಯಿ, ನಾನು ಅಥವಾ ಯಾರೇ ವಿರೋಧ ಪಕ್ಷದ ನಾಯಕರಾಗಲಿ ನಮ್ಮ ಮುಂದಿನ ಗುರಿ ಲೋಕಸಭೆ ಚುನಾವಣೆ. ಮೋದಿ ಬಂದಾಗ ವಿಧಾನಸಭೆ ಚುನಾವಣೆಲ್ಲಿ ಆದ ಸೇಡನ್ನು ಲೋಕಸಭೆ ಚುನಾವಣೆಯಲ್ಲಿ ತೀರಿಸಿಕೊಳ್ಳುತ್ತೇವೆ ಎಂದು ತಿಳಿಸಿದರು.
ಬಸವರಾಜ ಬೊಮ್ಮಾಯಿ ಮತ್ತು ನನ್ನ ನಡುವೆ ಯಾವುದೇ ಮನಸ್ತಾಪವಿಲ್ಲ, ನಮ್ಮ ನಡುವೆ ಜಗಳ ಹಚ್ಚಬೇಡಿ. ಜಗಳ ಏನಿದ್ದರೂ ಸಿದ್ದರಾಮಯ್ಯ ಮತ್ತು ಶಿವಕುಮಾರ್ ನಡುವೆ ಇದೆ. ನಾನು ನಮ್ಮ ನಾಯಕರಿಗೆ ಬಹಿರಂಗ ಸಭೆಯಲ್ಲಿ ನೀವು ಹೋಗಬೇಡಿ, ಶಿವಕುಮಾರ್ರನ್ನು ಮನೆಗೆ ಕರೆಸಿಕೊಳ್ಳಬೇಡಿ ಎಂದು ಸಲಹೆ ನೀಡಿದ್ದೇನೆ. ಸದ್ಯ ಅವರು ಆಕಾಶದಲ್ಲಿ ಇದ್ದಾರೆ. ರಾಜ್ಯದಲ್ಲಿ ಹೊಂದಾಣಿಕೆ ಆಗಿರುವ ಕುರಿತು ಪಕ್ಷದ ವೇದಿಕೆಯಲ್ಲಿ ಚರ್ಚೆ ಮಾಡುತ್ತೇವೆ. ಲೋಕಸಭೆ ಚುನಾವಣೆ ಒಳಗೆ ಎಲ್ಲವನ್ನೂ ತಿದ್ದಿಕೊಳ್ಳುವ ಕೆಲಸ ಆಗುತ್ತದೆ ಎಂದು ಹೇಳಿದರು.
ವಿಧಾನಸಭೆ ಚುನಾವಣೆ ಸೋಲಿಗೆ ನಾನೇ ಹೊಣೆ - ಬೊಮ್ಮಾಯಿ: ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ, ವಿಧಾನಸಭೆ ಚುನಾವಣೆ ಸೋಲನ್ನು ಮರೆತು ಎಲ್ಲ ನಾಯಕರು ಒಂದಾಗಿ ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಇನ್ನೊಂದು ಅವಧಿಗೆ ಪ್ರಧಾನಿ ಮಾಡೋಣ. ಲೋಕಸಭೆ, ವಿಧಾನಸಭೆ ಚುನಾವಣೆಗಳು ಬೇರೆ ಬೇರೆ ಆಗಿವೆ. ಮತ್ತೆ ಮೋದಿಯವರನ್ನು ಪ್ರಧಾನಿ ಮಾಡಲು ಕಾರ್ಯಕರ್ತರು ಸಂಕಲ್ಪ ಮಾಡಬೇಕು. ನರೇಂದ್ರ ಮೋದಿ ಬಂದ ಮೇಲೆ ಸ್ವಚ್ಛ, ದಕ್ಷ ಆಡಳಿತ ನೀಡಿದ್ದಾರೆ ಎಂದರು.
ದೇಶದಲ್ಲಿ 12 ಕೋಟಿ ಶೌಚಾಲಯ ನಿರ್ಮಾಣ ಮಾಡಲಾಗಿದೆ. ಪ್ರತಿ ಮನೆಗೆ ನೀರು ಕೊಡುವ ಬಗ್ಗೆ ಪ್ರಧಾನಿ ಹೇಳಿದ್ದರು. 40 ಲಕ್ಷ ಮನೆಗಳಿಗೆ ರಾಜ್ಯದಲ್ಲಿ ನೀರು ಕೊಡಲಾಗಿದೆ. ರೈತರು, ವಿದ್ಯಾರ್ಥಿಗಳಿಗೆ ಹಲವು ಕಾರ್ಯ ಮಾಡಿದ್ದೇವೆ. ದೇಶ ನರೇಂದ್ರ ಮೋದಿ ಆಡಳಿತದಲ್ಲಿ ಸುರಕ್ಷಿತವಾಗಿದೆ. ಪಾಕಿಸ್ತಾನದ ಸೊಕ್ಕು ಅಡಗಿಸಿದ್ದು ಪ್ರಧಾನಿ ನರೇಂದ್ರ ಮೋದಿ. ಪಾಟ್ನಾದಲ್ಲಿ ನಡೆದ ತೃತೀಯ ರಂಗದ ನಾಯಕರ ಸಭೆಯಲ್ಲಿ ದೇಶದ ಉದ್ಧಾರ ಬಗ್ಗೆ ಚರ್ಚೆ ಆಗಿಲ್ಲ, ನರೇಂದ್ರ ಮೋದಿಯನ್ನು ಹೇಗೆ ಸೋಲಿಸಬೇಕು. ರಾಹುಲ್ ಗಾಂಧಿಗೆ ಮದುವೆ ಮಾಡುವ ಬಗ್ಗೆ ಚರ್ಚೆ ಆಗಿದೆ. ಮೋದಿ ಸೋಲಲ್ಲ, ರಾಹುಲ್ ಗಾಂಧಿಗೆ ಮದುವೆ ಆಗಲ್ಲ ಎಂದು ಬೊಮ್ಮಾಯಿ ವ್ಯಂಗ್ಯವಾಡಿದರು.
ಮೋದಿ ಎದುರಿಸಲು ವಿರೋಧ ಪಕ್ಷದಲ್ಲಿ ಒಬ್ಬ ನಾಯಕ ಇಲ್ಲ, ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ 25 ಸ್ಥಾನಗಳನ್ನು ಮತ್ತೆ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ವಿಧಾನಸಭೆ ಚುನಾವಣೆ ಸೋಲಿಗೆ ನಾನೇ ಹೊಣೆ ಎಂದ ಬೊಮ್ಮಾಯಿ, ಪ್ರಾಮಾಣಿಕ ಕೆಲಸ ಮಾಡಿ ಕ್ಷೇತ್ರದ ಅಭಿವೃದ್ಧಿ ಮಾಡಿದ್ದೇವೆ. ಉತ್ತರ ಕರ್ನಾಟಕ ನೀರಾವರಿ ಯೋಜನೆಗಳಿಗೆ ಐದು ಸಾವಿರ ಕೋಟಿ ಅನುದಾನದವನ್ನು ಕೊಟ್ಟಿದ್ದೇನೆ. ಕಿತ್ತೂರು ಕರ್ನಾಟಕ ಅಭಿವೃದ್ಧಿ ಮಂಡಳಿ ಸ್ಥಾಪನೆಯ ಘೋಷಣೆ ಮಾಡಿದ್ದೇನೆ. ನಮ್ಮ ಅಭಿವೃದ್ಧಿ ಕಾರ್ಯ ಜನರಿಗೆ ತಲುಪಿಸುವುದರಲ್ಲಿ ನಾವು ವಿಫಲ ಆಗಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಮಳೆ ಇಲ್ಲ, ಜಲಾಶಯಗಳಲ್ಲಿ ನೀರು ಇಲ್ಲ ಈ ಬಗ್ಗೆ ಇವರಿಗೆ ಚಿಂತನೆ ಇಲ್ಲ. ಕೇಂದ್ರ ಸರ್ಕಾರ ಅಕ್ಕಿ ಕೊಟ್ಟಿಲ್ಲ ಎಂದು ಪ್ರತಿಭಟನೆ ಮಾಡಲು ಕಾಂಗ್ರೆಸ್ ನವರಿಗೆ ಯಾವ ನೈತಿಕತೆ ಇದೆ. ಸರ್ಕಾರದಲ್ಲಿದ್ದುಕೊಂಡು ಇವರು ಪ್ರತಿಭಟನೆ ಮಾಡ್ತಿದ್ದಾರೆ. ಅಕ್ಕಿ ಖರೀದಿಯಲ್ಲಿ ಹುನ್ನಾರ ಆಗಿದೆ. ಏನಾಗಿದೆ ಎಂಬುದು ನನಗೆ ಗೊತ್ತು. ಕೆಲವೇ ದಿನಗಳಲ್ಲಿ ಇವರ ಬಣ್ಣ ಬಯಲಾಗಲಿದೆ. ನಮ್ಮ ಸರ್ಕಾರದ ಮೇಲೆ ಗೂಬೆ ಕೂರಿಸುವ ಕೆಲಸ ಮಾಡಿದ್ರು, ಈಗ ಪರ್ಸೆಂಟೇಜ್ ಫಿಕ್ಸ್ ಆಗುತ್ತಿದೆ. ಯಾವ ಯಾವ ಮಂತ್ರಿ ಗುತ್ತಿಗೆದಾರನಿಗೆ ಕರೆದು ಏನ್ ಹೇಳಿದ್ದಾರೆ ಎನ್ನುವುದು ಗೊತ್ತು. ದೆಹಲಿ ಕಾಂಗ್ರೆಸ್ ನವರಿಗೆ ಈಗ ಕರ್ನಾಟಕ ಎಟಿಎಂ ಆಗಿದೆ. ಎಲ್ಲ ಕಡೆ ಪರ್ಸಂಟೇಜ್ ಫಿಕ್ಸ್ ಆಗುತ್ತಿದೆ ಎಂದು ಆರೋಪಿಸಿದರು.
ಇದನ್ನೂ ಓದಿ: Guarantee scheme ಕೇಂದ್ರದಿಂದ ಅಕ್ಕಿ ಸಿಗದಿರೋದಕ್ಕೆ ರಾಜ್ಯ ಬಿಜೆಪಿ ನಾಯಕರೇ ಕಾರಣ: ರಾಮಲಿಂಗಾರೆಡ್ಡಿ