ಬೆಳಗಾವಿ: ರಾಜ್ಯದಲ್ಲಿ ಬಿ.ಎಸ್.ಯಡಿಯೂರಪ್ಪನವರು ಒಳ್ಳೆಯ ಕೆಲಸ ಮಾಡುತ್ತಿದ್ದರೂ ಇನ್ನುಳಿದ ಸಂಪುಟ ಸಹೋದ್ಯೋಗಿಗಳು ಅವರನ್ನು ಕೆಲಸ ಮಾಡಲು ಬಿಡುತ್ತಿಲ್ಲ ಎಂದು ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.
ನಗರದ ಆರ್ಟಿಓ ಸರ್ಕಲ್ ಬಳಿಯಿರುವ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಗ್ರಾಮೀಣ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಹಮ್ಮಿಕೊಂಡ ಬಾಗೇವಾಡಿ ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಅಸ್ಥಿರ ಇರುವ ಸಂದರ್ಭದಲ್ಲಿ ಅನೇಕ ಯೋಜನೆಗಳನ್ನು ಜಿಲ್ಲೆಗೆ ತಂದಿದ್ದೇನೆ. ಈ ಸಂದರ್ಭದಲ್ಲಿ ಯಡಿಯೂರಪ್ಪ ಅವರನ್ನು ನೆನಸಬೇಕು. ಅವರು ಜಿಲ್ಲೆಯ ಅಭಿವೃದ್ಧಿ ಯೋಜನೆಗೆ ಸಹಕಾರ ನೀಡುತ್ತಾ ಒಳ್ಳೆಯ ಕೆಲಸವನ್ನು ಮಾಡುತ್ತಿದ್ದಾರೆ. ಆದರೆ ಅವರ ಸಂಪುಟದ ಸಚಿವರು ಮಾತ್ರ ಅವರನ್ನು ಕೆಲಸ ಮಾಡಲು ಬಿಡುತ್ತಿಲ್ಲ ಎಂದು ಆರೋಪಿಸಿದರು.
ಕೋವಿಡ್ ನಿರ್ವಹಣೆಯಲ್ಲಿ ಕಾಂಗ್ರೆಸ್ ವಿರೋಧ ಪಕ್ಷದ ಸ್ಥಾನದಲ್ಲಿದ್ದರೂ ಬಿಜೆಪಿ ಪಕ್ಷಕ್ಕೆ ಎಲ್ಲಾ ರೀತಿಯಿಂದಲೂ ಸಹಕಾರ ನೀಡಿದ್ದೇವೆ. ಆದ್ರೆ, ಬಿಜೆಪಿ ಸರ್ಕಾರ ಮಾತ್ರ ಕೋವಿಡ್ ನಿರ್ವಹಣೆಯಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ. ಇದರಿಂದಾಗಿ ದೇಶದಲ್ಲಿ 14 ಕೋಟಿಗೂ ಅಧಿಕ ಯುವಕರು ಉದ್ಯೋಗದಿಂದ ವಂಚಿತರಾಗಿದ್ದಾರೆ. ಸಮಾಜದಲ್ಲಿ ಮಹಿಳೆಯರು, ರೈತರು, ಕಾರ್ಮಿಕರು ಸೇರಿದಂತೆ ಯಾರು ಸಮಾಧಾನದಿಂದ ಇಲ್ಲ.ಹೀಗಾಗಿ ಎಷ್ಟೋ ಜನರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎಂದರು.
ಬಿಜೆಪಿ ಸರ್ಕಾರ ಕಾಂಗ್ರೆಸ್ ಪಕ್ಷ ಇಡೀ ದೇಶದಲ್ಲಿ ಹೇಗಾದರೂ ಮಾಡಿ ಕಾಂಗ್ರೆಸ್ ಪಕ್ಷದ ಹೆಸರನ್ನು ಕೆಡಿಸಬೇಕೆಂದು ವ್ಯವಸ್ಥಿತ ಹುನ್ನಾರ ಮಾಡಿಕೊಂಡು ಬಂದಿದ್ದಾರೆ. ಆದ್ರೆ, ಕೊರೊನಾ ವೈರಸ್ ಬರುವ ಮುಂಚೆಯೇ ಕಾಂಗ್ರೆಸ್ ಪಕ್ಷದ ರಾಹುಲ್ ಗಾಂಧಿಯವರು ವಿಮಾನಯಾನ ಬಂದ್ ಮಾಡಿ ಇಲ್ಲವೆಂದ್ರೆ ದೇಶದ ಆರ್ಥಿಕ ಪರಿಸ್ಥಿತಿ ಹದಗೆಟ್ಟ ಹೋಗುತ್ತದೆ ಎಂದು ಕೇಂದ್ರ ಸರ್ಕಾರಕ್ಕೆ ಸಲಹೆ ನೀಡಿದ್ದರು. ಆದ್ರೆ, ಅವರ ಹೇಳಿಕೆಯನ್ನು ಲೇವಡಿ ಮಾಡಿದರು ಎಂದು ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಶಾಸಕಿ ಲಕ್ಷ್ಮೀ ವಾಗ್ದಾಳಿ ನಡೆಸಿದರು.
ಈ ಸಂದರ್ಭದಲ್ಲಿ ಗ್ರಾಮೀಣ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ವಿನಯ ನಾವಲಗಟ್ಟಿ, ಅಡಿವೇಶ ಇಟಗಿ, ಅರವಿಂದ ದಳವಾಯಿ, ತಾಲೂಕು ಪಂಚಾಯಿತಿ ಅಧ್ಯಕ್ಷ ಶಂಕರಗೌಡ ಪಾಟೀಲ ಮತ್ತಿತರ ಮುಖಂಡರು, ಕಾರ್ಯಕರ್ತರು ಇದ್ದರು.