ಬೆಳಗಾವಿ: ರಸ್ತೆ ಸುರಕ್ಷತ ಕ್ರಮಗಳು, ಡ್ರಗ್ಸ್ ಮುಕ್ತ ಭಾರತ ಹಾಗೂ ಕೊರೊನಾ ಮುಂಜಾಗ್ರತಾ ಕ್ರಮಗಳ ಕುರಿತಂತೆ ಸಮಾಜದಲ್ಲಿ ಜಾಗೃತಿ ಮಡಿಸುವ ನಿಟ್ಟಿನಲ್ಲಿ ಇಂದು ಕರ್ನಾಟಕ ರಾಜ್ಯ ಮೀಸಲು ಪೊಲೀಸ್(ಕೆಎಸ್ಆರ್ಪಿ) ಹಾಗೂ ರೋಟರಿ ಕ್ಲಬ್ ಸಹಯೋಗದಲ್ಲಿ ಸೈಕಲ್ ಱಲಿ ನಡೆಸಲಾಯಿತು.
ನಗರದ ಚೆನ್ನಮ್ಮ ವೃತ್ತದಲ್ಲಿರುವ ಕಿತ್ತೂರು ಚೆನ್ನಮ್ಮ ಪುತ್ಥಳಿಗೆ ಮಹಾನಗರ ಪೊಲೀಸ್ ಕಮಿಷನರ್ ಕೆ. ತ್ಯಾಗರಾಜನ್ ಹೂವಿನ ಹಾರ ಹಾಕಿ ನಮನ ಸಲ್ಲಿಸಿದರು. ಬಳಿಕ ಹಸಿರು ನಿಶಾನೆ ತೋರುವ ಮೂಲಕ ಜಾಥಾಗೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ರಸ್ತೆ ಅಪಘಾತ ತಡೆಗಟ್ಟುವ ಸಲುವಾಗಿ ರಸ್ತೆ ಸುರಕ್ಷಾ ಕ್ರಮಗಳು, ಸಮಾಜದಲ್ಲಿ ಹೆಚ್ಚುತ್ತಿರುವ ಡ್ರಗ್ಸ್ ಸೇವನೆ ಕುರಿತಂತೆ ಜಾಗೃತಿ ಹಾಗೂ ಕೊರೊನಾ ವೈರಸ್ ತಡೆಗೆ ಮುಂಜಾಗ್ರತಾ ಕ್ರಮಗಳ ಕುರಿತಂತೆ ಸಾರ್ವಜನಿಕರಿಗೆ ತಿಳುವಳಿಕೆ ನೀಡುವ ಸಲುವಾಗಿ ಸೈಕಲ್ ಜಾಥಾ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.
ಇದಕ್ಕೂ ಮುಂಚೆ ಕೆಎಸ್ಆರ್ಪಿ ಕಮಾಂಡೆಂಟ್ ಹಮ್ಜಾ ಹುಸೇನ್ ಮಾತನಾಡಿ, ಕರ್ನಾಟಕ ರಾಜ್ಯ ಮೀಸಲು ಪೊಲೀಸ್(ಕೆಎಸ್ಆರ್ಪಿ) ಆಶ್ರಯದಲ್ಲಿ ಬಹಳ ದಿನಗಳ ನಂತರ ಆರೋಗ್ಯದಾಯಕ ಚಟುವಟಿಕೆ ಆರಂಭವಾಗಿದೆ. ಈ ಕಾರ್ಯಕ್ರಮದ ಮೂಲಕ ವ್ಯಸನ ಮುಕ್ತ ಭಾರತ, ಡ್ರಗ್ಸ್ ಮುಕ್ತ ಭಾರತ, ಫಿಟ್ ಇಂಡಿಯಾ ಹಾಗೂ ರಸ್ತೆ ಸುರಕ್ಷತಾ ಕ್ರಮಗಳ ಜೊತೆಗೆ ಕೊರೊನಾ ಮುಂಜಾಗ್ರತಾ ಕ್ರಮಗಳ ಕುರಿತಂತೆ ಬೆಳಗಾವಿ ನಗರದ ನಾಗರಿಕರಿಗೆ ಹಾಗೂ ನಮ್ಮ ಇಡೀ ಸಮಾಜಕ್ಕೆ ಉತ್ತಮ ಸಂದೇಶ ನೀಡುವ ನಿಟ್ಟಿನಲ್ಲಿ ಸೈಕಲ್ ಜಾಥಾ ನಡೆಸಲಾಗುತ್ತಿದೆ ಎಂದು ತಿಳಿಸಿದರು.
ಈ ಸೈಕಲ್ ಜಾಥಾ ಚೆನ್ನಮ್ಮ ವೃತ್ತದಿಂದ ಕ್ಯಾಂಪ್, ಟಿಳಕವಾಡಿ, ಉದ್ಯಮಭಾಗ, ಪೀರನವಾಡಿಯಿಂದ ಮಚ್ಛೆ ಗ್ರಾಮದಲ್ಲಿರುವ 2ನೇ ಕೆಎಸ್ಆರ್ಪಿ ಕಮಾಂಡೆಂಟ್ ಗೆ ತೆರಳಿ ಮುಕ್ತಾಯವಾಗಲಿದೆ ಎಂದರು.