ಅಥಣಿ: ನಮ್ಮ ಸಿಎಂಗೆ ರಾಜ್ಯದ ಜನರಿಗಿಂತ ಮಹಾರಾಷ್ಟ್ರ ಬಿಜೆಪಿ ನಾಯಕರ ಮೇಲೆ ಹಿತಾಸಕ್ತಿ ಹೆಚ್ಚಾಗಿದೆ ಎಂದು ರೈತ ಮಹಿಳೆ ಜಯಶ್ರೀ ಅವರು ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ನೆರೆ ಸಂತ್ರಸ್ತರ ಪರಿಹಾರ ತಾರತಮ್ಯ ವಿರೋಧಿಸಿ 'ಬದುಕಿಸಿ ಇಲ್ಲವೇ ಮುಳುಗಿಸಿ, ಸಂಕಲ್ಪದೆಡೆಗೆ ಸಂತ್ರಸ್ತರ ನಡಿಗೆ' ದರೂರ ಸೇತುವೆಯಿಂದ ಅಥಣಿ ತಹಶಿಲ್ದಾರ್ ಕಚೇರಿವರಗೆ ನಡೆದ ಬೃಹತ್ ಪಾದಯಾತ್ರೆಯಲ್ಲಿ ಪಾಲ್ಗೊಂಡ ಅವರು, ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯ ಪ್ರಚಾರದಲ್ಲಿ ಗುರುವಾರ ಬಿಎಸ್ವೈ ನೀಡಿದ್ದ ಭರವಸೆ ವಿರುದ್ಧ ಕಿಡಿಕಾರಿದರು.
ಕರ್ನಾಟಕದ ತುಬಚಿ ಬಬಲೇಶ್ವರ ಏತ ನೀರಾವರಿ ಯೋಜನೆಯ ನೀರನ್ನ ಮಹಾರಾಷ್ಟ್ರದ ಬೋರಾ ನದಿಗೆ ಹರಿಸುವ ಹಾಗೂ ಮಹಾರಾಷ್ಟ್ರದ ಮೈಸಾಳ ಏತ ನೀರಾವರಿ ಯೋಜನೆಯಿಂದ ವಂಚಿತವಾದ ಜತ್ ತಾಲೂಕಿನ 48 ಹಳ್ಳಿಗಳ ರೈತರಿಗೆ ನೀರು ಹರಿಸಲು ಮಹಾರಾಷ್ಟ್ರ ಸರ್ಕಾರದೊಂದಿಗೆ ಸಹಕರಿಸುವುದು ನಮ್ಮ ಸರ್ಕಾರದ ಗುರಿ ಎಂದು ಮಹಾರಾಷ್ಟ್ರದ ಜತ್ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿಲಾಸ ರಾವ್ ಪರ ಪ್ರಚಾರ ಸಭೆಯಲ್ಲಿ ನೀಡಿದ್ದ ಹೇಳಿಕೆಗೆ ರೈತರಿಂದ ಭಾರಿ ಆಕ್ರೋಶ ವ್ಯಕ್ತವಾಗಿದೆ.
ಅದರಲ್ಲೂ ಇಂದು ಅಥಣಿ ತಾಲೂಕಿನಲ್ಲಿ ನೆರೆ ಸಂತ್ರಸ್ತರ ಪರಿಹಾರ ತಾರತಮ್ಯ ವಿರೋಧಿಸಿ ಪ್ರತಿಭಟನೆ ನಡೆದಿದೆ.