ಅಥಣಿ: ಕೇಂದ್ರ ಸರ್ಕಾರದ ಜನವಿರೋಧಿ ಕಾಯ್ದೆ ಹಾಗೂ ತೈಲ ಬೆಲೆ, ದಿನನಿತ್ಯ ಜೀವನಾಂಶ ವಸ್ತುಗಳ ದರ ಏರಿಕೆ ಮತ್ತು ಅಡುಗೆ ಅನಿಲ ಬೆಲೆ ಏರಿಕೆ ಖಂಡಿಸಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ಧ ಅಥಣಿ ಕಾಂಗ್ರೆಸ್ ಮುಖಂಡರ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.
ಓದಿ: ತೆಲಗರಹಳ್ಳಿ ಗ್ರಾಮದಲ್ಲಿ ಕಾಡಾನೆಗಳು ಪ್ರತ್ಯಕ್ಷ: ಜನರಲ್ಲಿ ಆತಂಕ!
ಶ್ರೀ ಮುರುಘೇಂದ್ರ ಬ್ಯಾಂಕಿನ ಮುಂಭಾಗದಲ್ಲಿ ಪ್ರಾರಂಭವಾದ ಪ್ರತಿಭಟನೆ, ಅಂಬೇಡ್ಕರ್ ವೃತ್ತದವರೆಗೂ ನಡೆಯಿತು. ಕಾಂಗ್ರೆಸ್ ಕಾರ್ಯಕರ್ತರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ದಿನನಿತ್ಯ ಪೆಟ್ರೋಲ್, ಡೀಸೆಲ್ ಬೆಲೆಗಳು ಗಗನಮುಖಿಯಾಗಿ ಏರುತ್ತಿರುವುದನ್ನು ಖಂಡಿಸಿ ಎತ್ತಿನಗಾಡಿ ಹತ್ತಿ ದಾರಿಯುದ್ದಕ್ಕೂ ಸಾಗಿದ ಕಾರ್ಯಕರ್ತರು ವಿಭಿನ್ನವಾಗಿ ಪ್ರತಿಭಟನೆ ನಡೆಸಿದರು.
ಚಿಕ್ಕೋಡಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಲಕ್ಷ್ಮಣರಾವ ಚಿಂಗಳೆ ಮಾತನಾಡಿ, ಕೇಂದ್ರ ಸರ್ಕಾರದ ನಡೆ ಖಂಡಿಸಿ ಇಂದು ಅಥಣಿಯಲ್ಲಿ ಪ್ರತಿಭಟನೆ ನಡೆಸಲಾಗಿದೆ. ಸರ್ಕಾರ ವಲ್ಲಭಬಾಯಿ ಪಟೇಲ್ ವಿಮಾನ ನಿಲ್ದಾಣವನ್ನು ಅದಾನಿ ಕಂಪನಿಗೆ ಮಾರಿ ಎಲ್ಲದರ ಖಾಸಗೀಕರಣಕ್ಕೆ ಮುಂದಾಗಿದ್ದಾರೆ. ಮುಂದಿನ ದಿನಗಳಲ್ಲಿ ಅಂಬಾನಿ, ಅದಾನಿ ಕಂಪನಿಗಳ ಕೈಗೆ ದೇಶ ಮಾರಾಟ ಮಾಡುವ ತಂತ್ರ ಮಾಡುತ್ತಿದ್ದಾರೆ ಎಂದು ಮೋದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಮುಖಂಡ ಗಜಾನನ ಮಂಗಸೂಳಿ ಮಾತನಾಡಿ, ಕೇಂದ್ರ ಸರ್ಕಾರ ಪಂಜಾಬ್ ರೈತರ ಪ್ರತಿಭಟನೆ ಹತ್ತಿಕ್ಕಲು ಪ್ರಯತ್ನಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ದಿನನಿತ್ಯ ಬಳಕೆಯ ವಸ್ತುಗಳ ದರ ಹೆಚ್ಚಳವಾಗಿದ್ದರೂ ಮೋದಿ ಸರ್ಕಾರ ಕೈಕಟ್ಟಿ ಕುಳಿತಿದೆ ಎಂದು ಪ್ರಧಾನಿ ವಿರುದ್ಧ ವಾಗ್ದಾಳಿ ನಡೆಸಿದರು.