ಬೆಳಗಾವಿ: ಮುಂಡರಗಿಯ ತೋಂಟದಾರ್ಯ ಮಠದ ನಿಜಗುಣಾನಂದ ಸ್ವಾಮೀಜಿಗೆ ಮತ್ತೆ ಮತ್ತೆ ಜೀವಬೆದರಿಕೆ ಹಾಕುತ್ತಿರುವ ವೈಚಾರಿಕ ಚಿಂತನೆಗಳ ವಿರೋಧಿಗಳನ್ನು ತಕ್ಷಣ ಬಂಧಿಸಿ, ಕಠಿಣ ಕ್ರಮ ಜರುಗಿಸಿ ಶ್ರೀಗಳಿಗೆ ಹೆಚ್ಚಿನ ಭದ್ರತೆ ನೀಡುವಂತೆ ಆಗ್ರಹಿಸಿ ವಿವಿಧ ಬಸವಾಭಿಮಾನಿ ಸಂಘಟನೆಗಳ ಪ್ರಮುಖರು ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ.
ಜಿಲ್ಲೆಯಲ್ಲಿ ಒಕ್ಕೂಟದ ವತಿಯಿಂದ ಜಿಲ್ಲಾಡಳಿತದ ಮೂಲಕ ರಾಜ್ಯದ ಮುಖ್ಯಮಂತ್ರಿಗಳು ಹಾಗೂ ಗೃಹ ಸಚಿವರಿಗೆ ಮನವಿ ಸಲ್ಲಿಸಿ ಮಾತನಾಡಿದ ಬಸವ ಪ್ರತಿಷ್ಠಾನದ ಅಧ್ಯಕ್ಷ ಬಸವರಾಜ ರೊಟ್ಟಿ, ದೇಶ-ವಿದೇಶಗಳಲ್ಲಿ, ದೇಶದ ವಿವಿಧ ರಾಜ್ಯಗಳಲ್ಲಿ, ರಾಜ್ಯದ ಮೂಲೆ ಮೂಲೆಗಳಲ್ಲಿ ಬಸವಾದಿ ಶರಣರ ವೈಚಾರಿಕ ಚಿಂತನೆಗಳ ಮೂಲಕ ಜಾಗೃತಿ ಮೂಡಿಸುತ್ತಿರುವ ನಿಜಗುಣಾನಂದ ಸ್ವಾಮೀಜಿಗಳ ವೈಚಾರಿಕ ಚಿಂತನೆಗಳನ್ನು ಅರಗಿಸಿಕೊಳ್ಳಲಾಗದ ಕೆಲ ಕಿಡಿಗೇಡಿಗಳು ಕೊಲೆ ಬೆದರಿಕೆ ಹಾಕುತ್ತಿದ್ದಾರೆ. ಅಂತಹವರನ್ನು ತಕ್ಷಣ ಬಂಧಿಸುವಂತೆ ಆಗ್ರಹಿಸಿದರು.
ಇನ್ನು ರಾಷ್ಟ್ರೀಯ ಬಸವ ಸೇನೆಯ ಅಧ್ಯಕ್ಷ ಶಂಕರ ಗುಡಸ್ ಮಾತನಾಡಿ, ಈಗಾಗಲೇ ಎಂ.ಎಂ.ಕಲಬುರ್ಗಿ ಮತ್ತು ಗೌರಿ ಲಂಕೇಶ್ರನ್ನು ಬಲಿ ಪಡೆದಿದ್ದಾರೆ. ಅಲ್ಲದೆ ಇತ್ತೀಚೆಗೆ ತೋಂಟದಾರ್ಯ ಸಿದ್ದಲಿಂಗ ಶ್ರೀಗಳು ಹಾಗೂ ಪೂಜ್ಯ ಮಾತಾಜಿ ಅವರನ್ನು ಕಳೆದುಕೊಂಡಿರುವ ಲಿಂಗಾಯತ ಸಮಾಜ ದುಃಖದಲ್ಲಿದೆ. ಇಂತಹ ಸಂದರ್ಭದಲ್ಲಿ ನಿಜಗುಣಾನಂದ ಶ್ರೀಗಳಿಗೆ ಪದೇ ಪದೆ ಜೀವಬೆದರಿಕೆಯ ಕರೆಗಳು ಹಾಗೂ ಅನಾಮಧೇಯ ಪತ್ರಗಳು ಬರುತ್ತಿರುವದು ಆತಂಕ ಮೂಡಿಸಿದೆ ಎಂದರು.