ಬೆಳಗಾವಿ/ಮಹಾರಾಷ್ಟ್ರ: ಚುನಾವಣೆ ನೀತಿ ಸಂಹಿತೆ ಉಲ್ಲಂಘಿಸಿ ಪ್ರಚೋದನಾತ್ಮಕ ಭಾಷಣ ಮಾಡಿರುವ ಆರೋಪ ಹೊತ್ತಿದ್ದ ಶಿವಸೇನೆ ವಕ್ತಾರ, ರಾಜ್ಯಸಭೆ ಸದಸ್ಯ ಸಂಜಯ್ ರಾವುತ್ ಸೇರಿ ಇಬ್ಬರಿಗೆ ಬೆಳಗಾವಿಯ ಜಿಲ್ಲಾ ಮತ್ತು ಪ್ರಧಾನ ಸತ್ರ ನ್ಯಾಯಾಲಯವು ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.
50 ಸಾವಿರ ರೂ ಭದ್ರತೆ, ನಿಗದಿತ ಸಮಯದಲ್ಲಿ ಕೋರ್ಟ್‌ಗೆ ಹಾಜರಾಗಬೇಕೆಂದು ಸೂಚನೆ ನೀಡಿ ಜಿಲ್ಲಾ ಮತ್ತು ಪ್ರಧಾನ ಸತ್ರ ನ್ಯಾಯಾಲಯದ ನ್ಯಾಯಾಧೀಶ ಮುಸ್ತಫಾ ಹುಸೇನ್ ಅವರು ನಿರೀಕ್ಷಣಾ ಜಾಮೀನು ಮಂಜೂರು ಮಾಡಿ ಆದೇಶ ಹೊರಡಿಸಿದ್ದಾರೆ. 12 ಮೇ 2018ರಲ್ಲಿ ಬೆಳಗಾವಿಯಲ್ಲಿ ನಡೆದಿದ್ದ ಖಾಸಗಿ ಕಾರ್ಯಕ್ರಮದಲ್ಲಿ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿ ಸಂಜಯ್ ರಾವುತ್ ಪ್ರಚೋದನಾತ್ಮಕ ಭಾಷಣ ಮಾಡಿದ್ದರು. ಈ ಸಂಬಂಧ ಇಲ್ಲಿಯ ಟಿಳಕವಾಡಿ ಠಾಣೆಯಲ್ಲಿ ರಾವುತ್ ಅವರ ವಿರುದ್ಧ ಚುನಾವಣೆ ಆಯೋಗದ ಅಧಿಕಾರಿಗಳು ದೂರು ದಾಖಲಿಸಿದ್ದರು. ಪ್ರಕರಣಕ್ಕೆ ಸಂಬಂಧಪಟ್ಟಂತೆ ಎರಡು ತಿಂಗಳ ಹಿಂದೆಷ್ಟೇ ಸಂಜಯ್ ರಾವುತ್‌ಗೆ ಬೆಳಗಾವಿಯ 4ನೇ ಜೆಎಂಎಫ್‌ಸಿ ನ್ಯಾಯಾಲಯವು ಸಮನ್ಸ್ ಜಾರಿಗೊಳಿಸಿತ್ತು.
ಇದನ್ನೂ ಓದಿ: ಅನುದಾನದಲ್ಲಿ ಒಂದು ಕಣ್ಣಿಗೆ ಬೆಣ್ಣೆ, ಇನ್ನೊಂದು ಕಣ್ಣಿಗೆ ಸುಣ್ಣ: ಮೋದಿ ಸರ್ಕಾರದ ವಿರುದ್ಧ ಹೆಚ್ಡಿಕೆ ಟೀಕೆ
ಈ ಹಿನ್ನೆಲೆಯಲ್ಲಿ ಕಳೆದ ವರ್ಷ ಡಿಸೆಂಬರ್ 1ಕ್ಕೆ ಕೋರ್ಟ್‌ಗೆ ಹಾಜರಾಗಿದ್ದ ಸಂಜಯ್ ರಾವುತ್ ಪರ ವಕೀಲರು ಸಮಯ ನೀಡುವಂತೆ ಕೇಳಿಕೊಂಡಿದ್ದರು. ಸದ್ಯ ಬೆಳಗಾವಿಯ ಜಿಲ್ಲಾ ಮತ್ತು ಪ್ರಧಾನ ಸತ್ರ ನ್ಯಾಯಾಲಯ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದ್ದರಿಂದ ಅವರಿಗೆ ರಿಲೀಫ್ ಸಿಕ್ಕಂತಾಗಿದೆ.
ಪ್ರಕರಣ ಹಿನ್ನೆಲೆ: 2018ರ ಏಪ್ರಿಲ್ 18 ರಂದು ಬೆಳಗಾವಿಯ ಭಾಗ್ಯ ನಗರದ ರಾಮನಾಥ ಮಂಗಲ ಕಾರ್ಯಾಲಯದಲ್ಲಿ ಆಯೋಜಿಸಿದ್ದ ಖಾಸಗಿ ಕಾರ್ಯಕ್ರಮದಲ್ಲಿ ಸಂಜಯ್ ರಾವುತ್ ಪ್ರಚೋದನಕಾರಿ ಭಾಷಣ ಮಾಡಿದ್ದರು. ಆಗ ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ ಇತ್ತು. ಹೀಗಾಗಿ ಚುನಾವಣೆ ಆಯೋಗದ ಅಧಿಕಾರಿಗಳು ಸಂಜಯ್ ರಾವತ್, ಕಿರಣ್ ಠಾಕೂರ್, ಪ್ರಕಾಶ್ ಬಿಳಗೋಜಿ, ಸುರೇಂದ್ರ ನಾಯಿಕ ವಿರುದ್ಧ ಟಿಳಕವಾಡಿ ಪೊಲೀಸ್ ಠಾಣೆಯಲ್ಲಿ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ದೂರು ದಾಖಲಿಸಿದ್ದರು.
ಡಿಸೆಂಬರ್ 1ರಂದು ವಿಚಾರಣೆಗೆ ಹಾಜರಾಗುವಂತೆ ನಾಲ್ವರಿಗೂ ನ್ಯಾಯಾಲಯ ಸಮನ್ಸ್ ಜಾರಿಗೊಳಿಸಿತ್ತು. ವೈಯಕ್ತಿಕ ಕಾರಣದಿಂದ ನಮ್ಮ ಕಕ್ಷಿದಾರರಿಗೆ ವಿಚಾರಣೆಗೆ ಹಾಜರಾಗಲು ಸಾಧ್ಯವಾಗಿಲ್ಲ. ಸಿಆರ್‌ಪಿಸಿ 205 ಸೆಕ್ಷನ್ ಪ್ರಕಾರ ವಿಚಾರಣೆಗೆ ಹಾಜರಾಗಲು ಮತ್ತೆ ಕಾಲಾವಕಾಶ ಕೊಡಬೇಕು ಎಂದು ಆರೋಪಿಗಳ ಪರ ವಕೀಲರು ಅರ್ಜಿ ಸಲ್ಲಿಸಿದರು. ಇದಕ್ಕೆ ನ್ಯಾಯಾಧೀಶರು ಸಮ್ಮತಿ ನೀಡಿ ಮುಂದಿನ ವಿಚಾರಣೆ ದಿನಾಂಕವನ್ನು ನಿಗದಿಗೊಳಿಸಿದರು.
ಉದ್ವಿಗ್ನತೆಗೆ ಇನ್ನಷ್ಟು ತುಪ್ಪ ಸುರಿದಿದ್ದ ರಾವುತ್: ಗಡಿ ವಿಚಾರವಾಗಿ ಕರ್ನಾಟಕ ಮತ್ತು ಮಹಾರಾಷ್ಟ್ರ ನಡುವೆ ಉದ್ವಿಗ್ನತೆ ಉಂಟಾಗಿರುವ ಸಂದರ್ಭದಲ್ಲೇ ರಾವುತ್ ಇತ್ತೀಚೆಗೆ ಕೆಲವು ಹೇಳಿಕೆಗಳನ್ನು ನೀಡುವ ಮೂಲಕ ಹೊಸ ವಿವಾದವನ್ನು ಹುಟ್ಟುಹಾಕಿದ್ದರು. ಚೀನಾ ದೇಶವನ್ನು ಪ್ರವೇಶಿಸಿದಂತೆಯೇ ನಾವು ಕರ್ನಾಟಕವನ್ನು ಪ್ರವೇಶಿಸುತ್ತೇವೆ ಎಂದು ಹೇಳಿಕೆ ನೀಡಿ, ಉದ್ವಿಗ್ನತೆಗೆ ಇನ್ನಷ್ಟು ತುಪ್ಪ ಸುರಿದಿದ್ದರು. ಪ್ರತಿಯಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಹ ಇವರ ಹೇಳಿಕೆಗೆ ತೀಕ್ಷ್ಣವಾಗಿ ಉತ್ತರ ನೀಡಿದ್ದರು.
ಇದನ್ನೂ ಓದಿ: ಅದಾನಿ ವಿಚಾರದಲ್ಲಿ ಪ್ರಧಾನಿಗಳೇ ನೀವು ಮೌನಿ ಬಾಬಾ ಆಗಿದ್ದೇಕೆ?: ಮೋದಿ ಪ್ರಶ್ನಿಸಿದ ಮಲ್ಲಿಕಾರ್ಜುನ ಖರ್ಗೆ!