ಬೆಳಗಾವಿ: ಹಿಂದೂ ಜನ ಜಾಗೃತಿ ಸಮಿತಿ ವತಿಯಿಂದ ಪ್ರತಿವರ್ಷ ನಡೆಸುವಂತೆ ಈ ವರ್ಷವೂ ಸಹ 8ನೇ ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನವನ್ನು ಮೇ 27 ರಿಂದ ಗೋವಾ ರಾಜ್ಯದ ಪುಂಡಾ ಜಿಲ್ಲೆ ರಾಮನಾಥ ದೇವಸ್ಥಾನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿಯ ರಾಜ್ಯ ಸಮನ್ವಯಕ ಗುರುಪ್ರಸಾದ್ ಗೌಡ ತಿಳಿಸಿದ್ದಾರೆ.
ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಶ್ವ ಕಲ್ಯಾಣಕಾರಿ ಹಿಂದೂ ರಾಷ್ಟ್ರದ ಸಂಕಲ್ಪಕ್ಕಾಗಿ ಒಟ್ಟಾದ ಹಿಂದೂ ಸಂಘಟನೆಗಳು ಹಾಗೂ ಹಿಂದೂ ಜನಜಾಗೃತಿ ಸಮಿತಿ ಹಲವು ವರ್ಷಗಳಿಂದ ದೇಶದಾದ್ಯಂತ ಹಿಂದೂ ರಾಷ್ಟ್ರ ವಿಷಯದಲ್ಲಿ ದೊಡ್ಡ ಪ್ರಮಾಣದ ಜಾಗೃತಿ ಮೂಡಿಸುತ್ತಿದೆ. 8ನೇ ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನಕ್ಕೆ ದೇಶದ 26 ರಾಜ್ಯಗಳಿಂದ 200ಕ್ಕಿಂತ ಅಧಿಕ ಸಂಘಟನೆಗಳು, 800ಹೆಚ್ಚು ಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದರು.
ಅಧಿವೇಶನದಲ್ಲಿ ಕೇಂದ್ರದಲ್ಲಿ ಹೊಸ ಸರ್ಕಾರ ಸ್ಥಾಪನೆ ಬಳಿಕ ಕಾಶ್ಮೀರಿ ಹಿಂದೂಗಳ ಪುನರ್ವಸತಿ, ಸಮಾನ ನಾಗರಿಕ ಕಾನೂನು, ಕಲಂ 370 ರದ್ದುಗೊಳಿಸುವಿಕೆ, ಗೋ ಹತ್ಯೆ ನಿಷೇಧ ಕಾನೂನು, ಮತಾಂತರ ನಿಷೇಧ ಕಾನೂನು, ಅಯೋಧ್ಯೆಯಲ್ಲಿ ಶ್ರೀ ರಾಮ ಮಂದಿರದ ಪುನರ್ ನಿರ್ಮಾಣ ಸೇರಿದಂತೆ ಹಲವು ವಿಷಯಗಳ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎಂದರು.