ಬೆಳಗಾವಿ: ಜಿಲ್ಲೆಯ ಪ್ರಭಾವಿ ನಾಯಕರಾದ ಡಿಸಿಎಂ ಲಕ್ಷ್ಮಣ ಸವದಿ ಹಾಗೂ ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ ಮೂರು ವರ್ಷಗಳ ಬಳಿಕ ಒಂದಾಗಿದ್ದಾರೆ. ಒಂದೇ ಸೋಫಾದ ಮೇಲೆ ಕುಳಿತು ಉಭಯ ನಾಯಕರು ಕೆಲಹೊತ್ತು ಮಾತುಕತೆ ನಡೆಸಿದರು.
ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಒಂದಾಗಿ ನಿರ್ಧಾರ ತೆಗೆದುಕೊಳ್ಳಿ ಎಂದು ಬಿಜೆಪಿ ಹಾಗೂ ಆರ್ಎಸ್ಎಸ್ ನಾಯಕರ ಖಡಕ್ ಸೂಚನೆ ಹಿನ್ನೆಲೆಯಲ್ಲಿ ಎರಡು ದಿನಗಳ ಹಿಂದೆಯಷ್ಟೇ ಒಂದೇ ವೇದಿಕೆಯಲ್ಲಿ ಸುಮಾರು 10 ಕ್ಕೂ ಅಧಿಕ ನಾಯಕರು ಸೇರಿ ಸುದ್ದಿಗೋಷ್ಠಿ ನಡೆಸಿದ್ದರು. ಆದರೆ ಸಚಿವ ರಮೇಶ್ ಜಾರಕಿಹೊಳಿ ಮಾತ್ರ ಈ ಸುದ್ದಿಗೋಷ್ಠಿಯಲ್ಲಿ ಹಾಜರಿರಲಿಲ್ಲ.
ಡಿಸಿಸಿ ಬ್ಯಾಂಕ್ ನಿರ್ದೇಶಕರ ಚುನಾವಣೆ ಅಂತಿಮ ಹಂತಕ್ಕೆ ಬಂದಿದ್ದು ಉಭಯ ನಾಯಕರು ಒಟ್ಟಿಗೆ ಪ್ರತ್ಯಕ್ಷರಾಗಿದ್ದಾರೆ. ಇದೇ ವೇಳೆ ಬೆಳಗಾವಿಯ ಡಿಸಿಸಿ ಬ್ಯಾಂಕ್ ಕೊಠಡಿಯಲ್ಲಿ ಇಬ್ಬರೂ ಗೌಪ್ಯ ಸಭೆ ನಡೆಸಿದರು. ಇನ್ನೂ ಮೂರು ಸ್ಥಾನಗಳು ಕಗ್ಗಂಟಾದ ಹಿನ್ನೆಲೆಯಲ್ಲಿ ಅಭ್ಯರ್ಥಿಗಳ ಮನವೊಲಿಸಲು ಕಸರತ್ತು ನಡೆಸಿದ್ದಾರೆ ಎಂಬ ಮಾಹಿತಿ ದೊರೆತಿದೆ.
ನಾಮಪತ್ರ ಹಿಂಪಡೆಯಲು ಖಾನಾಪುರ, ರಾಮದುರ್ಗ ಹಾಗೂ ಉಣ್ಣೆ ನಿಗಮದ ಅಭ್ಯರ್ಥಿಗಳು ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ ಬ್ಯಾಂಕ್ ಚುನಾವಣೆಯಿಂದ ದೂರ ಉಳಿದಿದ್ದ ಸಚಿವ ಜಾರಕಿಹೊಳಿ ಕೊನೆಗೂ ಅಖಾಡಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಕೊನೆ ಕ್ಷಣದಲ್ಲಿ ಅಭ್ಯರ್ಥಿಗಳ ಮನವೊಲಿಕೆಗೆ ಡಿಸಿಎಂ ಸವದಿ, ಸಚಿವ ಜಾರಕಿಹೊಳಿ ಮುಂದಾಗಿದ್ದಾರೆ.