ಬೆಳಗಾವಿ: ಜೂಜಾಡುತ್ತಿದ್ದ ಸ್ಥಳದ ಮೇಲೆ ಪೊಲೀಸರು ದಿಢೀರ್ ದಾಳಿ ಮಾಡಿದ್ದು, ಅಲ್ಲಿಂದ ತಪ್ಪಿಸಿಕೊಳ್ಳುವ ಭರದಲ್ಲಿ ಯುವಕನೋರ್ವ ಬಾವಿಗೆ ಬಿದ್ದು ಮೃತಪಟ್ಟಿರುವ ಘಟನೆ ಬೆಳಗಾವಿ ಹೊರವಲಯದ ಅಲಾರವಾಡ ಗ್ರಾಮದಲ್ಲಿ ನಡೆದಿದೆ.
ಬಿ.ಕೆ ಕಂಗ್ರಾಳಿ ಗ್ರಾಮದ ಮನೋಹರ ಭರತ್ ಉಂದ್ರೆ (27) ಎಂಬಾತನೆ ಮೃತ ಯುವಕ. ಭಾನುವಾರ ಜಿಲ್ಲೆಯಾದ್ಯಂತ ಸಂಪೂರ್ಣ ಲಾಕ್ಡೌನ್ ಇತ್ತು. ಈ ವೇಳೆ ಅಲಾರವಾಡ ಗ್ರಾಮದಲ್ಲಿ ಕೆಲವು ಯುವಕರು ಜೂಜಾಡುತ್ತಿದ್ದರು. ಖಚಿತ ಮಾಹಿತಿ ಮೇರೆಗೆ ಜೂಜು ಅಡ್ಡೆ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ.
ಪೊಲೀಸರನ್ನು ಕಂಡ ತಕ್ಷಣವೇ ಯುವಕರು ಓಡಿ ಹೋಗಿದ್ದಾರೆ. ಇದೇ ಸಂದರ್ಭದಲ್ಲಿ ಓಡಿ ಹೋಗಿ ನಾಪತ್ತೆಯಾಗಿದ್ದ ಭರತ್ ಇಂದು ಬಾವಿಯೊಂದರಲ್ಲಿ ಶವವಾಗಿ ಪತ್ತೆಯಾಗಿದ್ದಾನೆ.
ಕತ್ತಲೆಯಾದ ಕಾರಣ ಯುವಕ ಆಯತಪ್ಪಿ ಬಾವಿಯಲ್ಲಿ ಬಿದ್ದಿರಬಹುದು ಎಂದು ಗ್ರಾಮಸ್ಥರು ಸಂಶಯ ವ್ಯಕ್ತಪಡಿಸಿದ್ದರು. ಸ್ಥಳಕ್ಕೆ ಭೇಟಿ ನೀಡಿದ ಅಗ್ನಿ ಶಾಮಕ ದಳ ಮತ್ತು ವಿಪತ್ತು ನಿರ್ವಹಣೆ ತಂಡ ಕಾರ್ಯಾಚರಣೆ ನಡೆಸಿ ಬಾವಿಯಲ್ಲಿ ಬಿದ್ದಿದ್ದ ಯುವಕನ ಶವವನ್ನು ಹೊರಗೆ ತೆಗೆದಿದ್ದಾರೆ.
ಇದನ್ನು ಓದಿ:ಬಿಮ್ಸ್ ಕೋವಿಡ್ ವಾರ್ಡ್ ರೌಂಡ್ಸ್: ಸೋಂಕಿತರ ಜತೆಗಿದ್ದ ಸಹಾಯಕರಿಗೆ ಗೇಟ್ ಪಾಸ್!