ಬೆಳಗಾವಿ: ಪದವಿ ಪರೀಕ್ಷೆಯಲ್ಲಿ ಪದೇ ಪದೆ ಫೇಲ್ ಆಗುತ್ತಿರುವುದಕ್ಕೆ ಹತಾಶೆಗೊಂಡ ಯುವಕ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದಿಂದ 300 ವಿದ್ಯಾರ್ಥಿಗಳ ಅಂಕಪಟ್ಟಿ ಮತ್ತು ಸ್ಕಾನರ್ ಕದ್ದು ಪರಾರಿಯಾಗುವಾಗ ಸಿಕ್ಕಿಬಿದ್ದಿರುವ ಘಟನೆ ನಡೆದಿದೆ.
ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲೂಕು ತುಬಚಿ ಗ್ರಾಮದ ಬಸಪ್ಪ ಶಿವಲಿಂಗಪ್ಪ ಹೊನವಾಡ (23) ಅಂಕಪಟ್ಟಿ ಕದ್ದು ಸಿಕ್ಕಿಬಿದ್ದ ಯುವಕ. ಈತ ಜಮಖಂಡಿ ತಾಲೂಕಿನ ಸರ್ಕಾರಿ ಪ್ರಥಮ ದರ್ಜೆ ಪದವಿ ಕಾಲೇಜಿನ ಬಿ.ಕಾಂ ವಿಭಾಗದ ವಿದ್ಯಾರ್ಥಿ. ಕೆಲ ವಿಷಯಗಳಲ್ಲಿ ಅನುತ್ತಿರ್ಣನಾಗಿದ್ದ ಈತ ಹಲವು ಸಲ ಮರು ಪರೀಕ್ಷೆ ಬರೆದರೂ ಪಾಸಾಗಿರಲಿಲ್ಲ. ಇದರಿಂದಾಗಿ ಮತ್ತಷ್ಟು ಕಂಗೆಟ್ಟ ಬಸಪ್ಪ ಶುಕ್ರವಾರ ರಾತ್ರಿ ಬೆಳಗಾವಿಗೆ ಬಂದು ಕಾನೂನು ಬಾಹಿರವಾಗಿ ವಿಶ್ವವಿದ್ಯಾಲಯ ವಿದ್ಯಾರ್ಥಿ ನಿಲಯದಲ್ಲಿರುವ ಅತನ ಗೆಳೆಯರ ಕೋಣೆಯಲ್ಲಿ ಆಶ್ರಯ ಪಡೆದಿದ್ದಾನೆ.
ಹೇಗಾದರೂ ಮಾಡಿ ಪದವಿ ಪಾಸಾದ ಅಂಕಪಟ್ಟಿ ಪಡೆಯಬೇಕು ಎಂಬ ಹಠದಿಂದ ಶನಿವಾರ ರಾತ್ರಿ 1.30ಕ್ಕೆ ವಿವಿ ಕಚೇರಿ ಗಾಜು ಒಡೆದು ಒಳನುಗ್ಗಿ ಅಲ್ಲಿದ್ದ 300 ಅಂಕಪಟ್ಟಿಗಳು ಮತ್ತು ಸ್ಕ್ಯಾನರ್ ಗಳನ್ನು ತೆಗೆದುಕೊಂಡು ಪರಾರಿಯಾಗಲು ಯತ್ನಿಸಿದ್ದಾನೆ.
ವೇಳೆ ಭದ್ರತಾ ಸಿಬ್ಬಂದಿ ಕಣ್ಣಿಗೆ ಬಿದ್ದಿದ್ದಾನೆ. ಈತ ಕಚೇರಿಯಲ್ಲಿ ಅಂಕಪಟ್ಟಿ ಎಗರಿಸುತ್ತಿರುವ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಕಾಕತಿ ಠಾಣೆ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದು, ಆತನಿಂದ ಎರಡು ಸ್ಕ್ಯಾನರ್ ಮತ್ತು 300 ವಿದ್ಯಾರ್ಥಿಗಳ ಅಂಕಪಟ್ಟಿಗಳನ್ನು ವಶಪಡಿಸಿಕೊಂಡಿದ್ದಾರೆ.