ಬೆಳಗಾವಿ: ಭಾಷೆ ತಿಳಿದಿದ್ದರೂ ತಿಳಿಯದಂತೆ ನಟಿಸುವ ಜನರ ಮಧ್ಯೆ ಇಲ್ಲೊಬ್ಬ ಯುವಕ ತನ್ನ ರಕ್ತದ ಮೂಲಕ ಕೃತಿಯನ್ನ ರಚಿಸಿ ಕರ್ನಾಟಕದಲ್ಲಿ ಕನ್ನಡಿಗರಿಗೆ ಖಾಸಗಿ ಮತ್ತು ಸರ್ಕಾರಿ ವಲಯದಲ್ಲಿ ಮೊದಲ ಆದ್ಯತೆ ಸಿಗಬೇಕೆಂದು ಆಗ್ರಹಿಸಿ ಸುಮಾರು 650 ಕಿಮೀ ಪಾದಯಾತ್ರೆ ನಡೆಸುವ ಕಾರ್ಯ ಕೈಗೊಂಡಿದ್ದಾರೆ.
ಶಿಗ್ಗಾಂವಿ ತಾಲೂಕಿನ ಮುಗಳಿ ಗ್ರಾಮದ ಮಂಜುನಾಥ ತಿಪ್ಪಣ್ಣ ಭದ್ರಶೆಟ್ಟಿ ಎಂಬುವರೇ ಈ ಅಪ್ಪಟ ಕನ್ನಡಪ್ರೇಮಿ. ಇವರು ಬಿಎ, ಬಿಇಡಿ ಪದವಿ ಮುಗಿಸಿ ಸದ್ಯ ಹಾವೇರಿ ಜಿಲ್ಲೆಯಲ್ಲಿರುವ ಗೊಟಗೂಡಿ ಜಾನಪದ ವಿಶ್ವವಿದ್ಯಾಲಯದಲ್ಲಿ ಎಂಎ ವ್ಯಾಸಂಗ ಮಾಡುತ್ತಿದ್ದಾರೆ. ಇದರ ಜೊತೆಗೆ ಕುಟುಂಬ ನಿರ್ವಹಣೆಗೆ ಚಿಕ್ಕಬಳ್ಳಾಪುರ ಮೆಗಾ ಡೈರಿಯಲ್ಲಿ ಕೆಲಸ ಕೂಡ ಮಾಡುತ್ತಿದ್ದಾರೆ. ಕನ್ನಡ ನಾಡು, ನುಡಿ ಉಳಿಸಿ - ಬೆಳೆಸಲು ಸುಮಾರು 650 ಕಿಮೀ ಪಾದಯಾತ್ರೆ ಹಮ್ಮಿಕೊಂಡಿದ್ದು, ದಾರಿಯುದ್ಧಕ್ಕೂ ಕನ್ನಡ ಭಾಷೆಯ ಮಹತ್ವವನ್ನು ಸಾರುತ್ತಿದ್ದಾರೆ. ಇಂದು ಬೆಳಗಾವಿಗೆ ಆಗಮಿಸಿದ ಇವರನ್ನು ಕನ್ನಡಪರ ಹೋರಾಟಗಾರ ಅಶೋಕ ಚಂದರಗಿಯವರು ಅದ್ಧೂರಿಯಾಗಿ ಬರಮಾಡಿಕೊಂಡು ಶುಭಹಾರೈಸಿದರು.
ಕನ್ನಡಿಗರು ನಾಡು ನುಡಿ, ಸಂಸ್ಕೃತಿಗಾಗಿ ತಮ್ಮ ರಕ್ತ ಹರಿಸಲು ಸಿದ್ಧರಿರುವರು. ಕನ್ನಡ ಎಂದರೆ ಲಿಪಿಗಳ ರಾಣಿ ಹೀಗೆ ಕನ್ನಡ ಭಾಷೆಯ ಮಹತ್ವ ಸಾರುವ ನಾಮಫಲಕ ಹಾಕಿಸಿಕೊಂಡು, ಮೈ ಮೇಲೆ ಹಳದಿ ಕೆಂಪು ಬಟ್ಟೆ ಧರಿಸಿ ಪಾದಯಾತ್ರೆ ಕೈಗೊಂಡಿದ್ದಾರೆ. ಕನ್ನಡ ಭಾಷೆಯ ಬಗ್ಗೆ ಜಾಗೃತಿ ಮೂಡಿಸಬೇಕು ಎಂಬ ಉದ್ದೇಶದಿಂದ ಆಂಧ್ರಪ್ರದೇಶದ ಕಾಂಚಿನಪಲ್ಲಿಯಿಂದ ಮಹಾರಾಷ್ಟ್ರದ ಗಡಿಯವರೆಗೂ ಸುಮಾರು 650 ಕಿಮೀ ಪಾದಯಾತ್ರೆ ಹಮ್ಮಿಕೊಂಡಿದ್ದಾರೆ.
ಕರ್ನಾಟಕದಲ್ಲಿ ಕನ್ನಡಿಗರಿಗೆ ಖಾಸಗಿ ಮತ್ತು ಸರ್ಕಾರಿ ವಲಯದಲ್ಲಿ ಮೊದಲ ಆದ್ಯತೆ ಸಿಗಬೇಕು. ಪ್ರತಿ ತಾಲೂಕಿನಲ್ಲಿ ಭುವನೇಶ್ವರಿ ಮಂದಿರ ನಿರ್ಮಿಸಬೇಕು. ಈ ನಾಡಿನಲ್ಲಿ ಇದ್ದುಕೊಂಡು ಈ ನಾಡಿನ ನೆಲ ಜಲ ಎಲ್ಲವನ್ನು ಉಪಯೋಗಿಸಿಕೊಂಡು ಈ ನಾಡಿನ ಬಗ್ಗೆ ಇಲ್ಲ ಸಲ್ಲದ್ದು ಮಾತಾಡುವುದನ್ನು ನಿಲ್ಲಿಸಬೇಕು ಎಂದು ಈ ವೇಳೆ ಮಂಜುನಾಥ ಒತ್ತಾಯಿಸಿದರು.