ಚಿಕ್ಕೋಡಿ: ಕಳೆದ ಮೂರ್ನಾಲ್ಕು ದಿನಗಳಿಂದ ಮಹಾರಾಷ್ಟ್ರದ ಘಟ್ಟ ಪ್ರದೇಶ ಹಾಗೂ ಬೆಳಗಾವಿ ಜಿಲ್ಲಾದ್ಯಂತ ಸುರಿಯುತ್ತಿರುವ ಭಾರಿ ಮಳೆಗೆ ಜಿಲ್ಲೆಯ ನದಿಗಳು ತುಂಬಿ ಹರಿಯುತ್ತಿದೆ. ಇನ್ನು ಚಿಕ್ಕೋಡಿ ಉಪವಿಭಾಗದ ನಾಲ್ಕು ಸೇತುವೆಗಳು ಜಲಾವೃತಗೊಂಡಿದೆ.
ಕೃಷ್ಣಾ, ವೇದಗಂಗಾ, ದೂದಗಂಗಾ, ಹಾಗೂ ಹಿರಣ್ಯಕೇಶಿ ನದಿ ನೀರಿನ ಮಟ್ಟದಲ್ಲಿ ಹೆಚ್ಚಳವಾಗಿದೆ. ನಿಪ್ಪಾಣಿ ತಾಲೂಕಿನ ವೇದಗಂಗಾ ನದಿಯ ಬಳಿಯಿರುವ ಜತ್ರಾಟ್- ಭೀವಶಿ, ಅಕ್ಕೋಳ-ಸಿದ್ನಾಳ ಹಾಗೂ ಕಾರದಗಾ - ಭೋಜ ಗ್ರಾಮದ ಸಂಪರ್ಕ ಸೇತುವೆ, ಹುಕ್ಕೇರಿ ತಾಲೂಕಿನ ಹಿರಣ್ಯಕೇಶಿ ನದಿಯ ಸಂಕೇಶ್ವರ - ನಾಗನೂರ ಗ್ರಾಮದ ಸಂಪರ್ಕ ಸೇತುವೆ ಮುಳುಗಡೆಯಾಗಿದೆ.
ಈ ಹಿನ್ನೆಲೆಯಲ್ಲಿ ಜನರು ಪರ್ಯಾಯ ಮಾರ್ಗವಾಗಿ ಸಂಚಾರ ನಡೆಸುತ್ತಿದ್ದಾರೆ. ಮಳೆ ಹೀಗೆ ಮುಂದುವರಿದಲ್ಲಿ ಹಲವು ಸೇತುವೆಗಳು ಮುಳುಗಡೆಯಾಗುವ ಸಾಧ್ಯತೆಯಿದೆ. ಇನ್ನು ನದಿ ತೀರದ ಗ್ರಾಮಗಳಿಗೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.