ಬೆಳಗಾವಿ: ಕೊರೊನಾ ಭೀತಿ ಮಧ್ಯೆಯೇ ಹೊರ ರಾಜ್ಯದ 49 ವಿದ್ಯಾರ್ಥಿಗಳು ಹಾಗೂ ಹೊರ ಜಿಲ್ಲೆಯ 735 ವಿದ್ಯಾರ್ಥಿಗಳು ಸೇರಿ ನಾಳೆ 74,424 ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯಲಿದ್ದಾರೆ.
ಇದಕ್ಕಾಗಿ ಶಿಕ್ಷಣ ಇಲಾಖೆ ಅಗತ್ಯ ಸಿದ್ಧತೆ ಮಾಡಿಕೊಂಡಿದೆ. ಬೆಳಗಾವಿ ಶೈಕ್ಷಣಿಕ ಜಿಲ್ಲೆಯಲ್ಲಿ 33,590, ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ 40,834 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 271 ಪರೀಕ್ಷಾ ಕೇಂದ್ರಗಳಿದ್ದು, ಬೆಳಗಾವಿಯಲ್ಲಿ 124, ಚಿಕ್ಕೋಡಿಯಲ್ಲಿ 147 ಕೇಂದ್ರಗಳನ್ನು ತೆರೆಯಲಾಗಿದೆ.
ತುರ್ತು ಪರಿಸ್ಥಿತಿ ಅನುಕೂಲಕ್ಕಾಗಿ 33 ಹೆಚ್ಚುವರಿ ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಈಗಾಗಲೇ ಎಲ್ಲಾ ಪರೀಕ್ಷಾ ಕೇಂದ್ರಗಳಿಗೆ 1,56,541 ಮಾಸ್ಕ್, 955 ಥರ್ಮಲ್ ಸ್ಕ್ಯಾನರ್‌ಗಳು, 1,136 ಲೀಟರ್ ಸ್ಯಾನಿಟೈಸರ್ ವಿತರಿಸಲಾಗಿದೆ.
ಪರೀಕ್ಷೆ ಬರೆಯಲು ಬರುವ ವಿದ್ಯಾರ್ಥಿಗಳಿಗೆ ಅಗತ್ಯ ಸಾರಿಗೆ ವ್ಯವಸ್ಥೆಯನ್ನು ಶಿಕ್ಷಣ ಇಲಾಖೆ ಮಾಡಿಕೊಂಡಿದೆ. ಪರೀಕ್ಷೆ ಬರೆಯಲು ಕಾಲ್ನಡಿಗೆ ಮೂಲಕ 20,441 ವಿದ್ಯಾರ್ಥಿಗಳು, ಸೈಕಲ್‌ಗಳಲ್ಲಿ 831 ವಿದ್ಯಾರ್ಥಿಗಳು, ಸ್ವಂತ ವಾಹನಗಳಲ್ಲಿ 39,490 ವಿದ್ಯಾರ್ಥಿಗಳು, ಶಾಲಾ ವಾಹನಗಳಲ್ಲಿ 1,466 ಹಾಗೂ ಕೆಎಸ್‌ಆರ್‌ಟಿಸಿ ಬಸ್‌ಗಳ ಮೂಲಕ 12,043 ವಿದ್ಯಾರ್ಥಿಗಳು ಆಗಮಿಸಲಿದ್ದಾರೆ.
ಹೊರ ಜಿಲ್ಲೆಗಳಲ್ಲಿ ವ್ಯಾಸಂಗ ಮಾಡುತ್ತಿದ್ದ 735 ಹಾಗೂ ಬೇರೆ ಜಿಲ್ಲೆಗಳಲ್ಲಿ ಬೆಳಗಾವಿಯ 976 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಮಹಾರಾಷ್ಟ್ರದ 49 ವಿದ್ಯಾರ್ಥಿಗಳು ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ ಪರೀಕ್ಷೆ ಬರೆಯಲಿದ್ದು, ಇ-ಪಾಸ್ ನೀಡಲಾಗಿದೆ. ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಒಪ್ಪಂದದ ಮೇರೆಗೆ 188 ಕೆಎಸ್‌ಆರ್‌ಟಿಸಿ ಬಸ್, 132 ಖಾಸಗಿ ವಾಹನಗಳ ವ್ಯವಸ್ಥೆ ಮಾಡಲಾಗಿದೆ.
ಬೆಳಗಾವಿ ಜಿಲ್ಲೆಯ 271 ಪರೀಕ್ಷಾ ಕೇಂದ್ರದಲ್ಲಿ ಒಟ್ಟು 4,029 ಪರೀಕ್ಷಾ ಕೊಠಡಿಗಳನ್ನು ಸ್ಥಾಪಿಸಲಾಗಿದೆ. 247 ಮುಖ್ಯ ಅಧೀಕ್ಷಕರು, 69 ಉಪ ಮುಖ್ಯ ಅಧೀಕ್ಷಕರು, 5,256 ಕೊಠಡಿ ಮೇಲ್ವಿಚಾರಕರು, 94 ಮಾರ್ಗಾಧಿಕಾರಿಗಳು, 273 ಸ್ಥಾನಿಕ ಜಾಗೃತ ದಳ, 131 ಜಿಲ್ಲಾ ಮಟ್ಟದ ವೀಕ್ಷಕ ಅಧಿಕಾರಿಗಳನ್ನು ನಿಯೋಜಿಸಲಾಗಿದೆ.
ಯಾವುದೇ ಪರೀಕ್ಷಾ ಕೇಂದ್ರಗಳು ಕ್ವಾರಂಟೈನ್ ಸೆಂಟರ್‌ಗಳಾಗಿಲ್ಲ ಎಂದು ಬೆಳಗಾವಿ ಜಿಲ್ಲೆಯ ಸಾರ್ವಜನಿಕ ಶಿಕ್ಷಣ ಇಲಾಖೆ ಮಾಹಿತಿ ನೀಡಿದೆ.