ಚಿಕ್ಕೋಡಿ (ಬೆಳಗಾವಿ): ಚಿಕ್ಕೋಡಿ ಹಾಗೂ ನಿಪ್ಪಾಣಿ ತಾಲೂಕಿನ ನದಿ ಪಾತ್ರದ ಜಮೀನುಗಳು ಕೃಷ್ಣ ನದಿಯ ಪ್ರವಾಹಕ್ಕೆ ಜಲಾವೃತಗೊಂಡಿವೆ. ಉಭಯ ತಾಲೂಕುಗಳಲ್ಲಿ ಸುಮಾರು 16 ಸಾವಿರ ಹೆಕ್ಟೇರ್ ಭೂ ಪ್ರದೇಶದಲ್ಲಿರುವ ಬೆಳೆ ಮುಳುಗಡೆಗೊಂಡಿದೆ ಎಂದು ಕೃಷಿ ಅಧಿಕಾರಿಗಳು ಅಂದಾಜಿಸಿದ್ದಾರೆ.
ಮುಂಗಾರು ಹಂಗಾಮಿನಲ್ಲಿ ರೈತರು ಕಬ್ಬು, ಸೋಯಾಬಿನ್, ಶೇಂಗಾ, ಉದ್ದು, ಹೆಸರು ಮತ್ತು ಗೋವಿನ ಜೋಳ ನಾಟಿ ಮಾಡಿದ್ದರು. ಇನ್ನೇನು ಫಸಲು ಕೈ ತಲುಪಬೇಕು ಅನ್ನುವಷ್ಟರಲ್ಲಿ ನದಿ ನೀರು ರೈತರ ಜಮೀನಿಗೆ ನುಗ್ಗಿದೆ. ಮೊದಲೇ ರೈತರು ಬ್ಯಾಂಕ್, ಸಹಕಾರ ಸಂಘ, ವೈಯಕ್ತಿಕ ಸಾಲ ಮಾಡಿ ಬೆಳೆ ಬೆಳೆದಿರುತ್ತಾರೆ. ಇದೀಗ ರೈತರು ಬೆಳೆ ಪರಿಹಾರಕ್ಕಾಗಿ ಆಗ್ರಹಿಸುತ್ತಿದ್ದು, ಅವರ ಗೋಳು ಕೇಳುವವರೇ ಇಲ್ಲದಂತಾಗಿದೆ.
ವೇದಗಂಗಾ ನದಿ ನೀರಿನಿಂದ ನಿಪ್ಪಾಣಿ ತಾಲೂಕಿನ ಜತ್ರಾಟ, ಭೀವಸಿ, ಅಕ್ಕೋಳ, ಸಿದ್ನಾಳ, ಹುನ್ನರಗಿ, ಮಮದಾಪೂರ, ದೂಧಗಂಗಾ ನದಿ ನೀರಿನಿಂದ ಕಾರದಗಾ, ಭೋಜ, ಮಾಂಗನೂರ, ಬೇಡಕಿಹಾಳ ಚಿಕ್ಕೋಡಿ ತಾಲೂಕಿನ ಸದಲಗಾ, ಮಲಿಕವಾಡ, ಯಕ್ಸಂಬಾ, ಕಲ್ಲೋಳ ಮುಂತಾದ ಗ್ರಾಮಗಳ ರೈತರ ಬೆಳೆಗಳು ನಾಶವಾಗಿವೆ. ಇನ್ನೂ ಕೃಷ್ಣಾ ನದಿಯ ವ್ಯಾಪ್ತಿಯ ಕಲ್ಲೋಳ, ಯಡೂರ, ಚೆಂದೂರ, ಯಡೂರವಾಡಿ, ಇಂಗಳಿ, ಮಾಂಜರಿ ಹಾಗೂ ಅಂಕಲಿ ಗ್ರಾಮದ ರೈತರು ಬೆಳೆದ ವಿವಿಧ ಬೆಳೆಗಳು ಸಂಭವನೀಯ ಪ್ರವಾಹಕ್ಕೆ ತುತ್ತಾಗಿ ಹೋಗಿವೆ.
ನಿಪ್ಪಾಣಿ ಹಾಗೂ ಚಿಕ್ಕೋಡಿ ತಾಲೂಕುಗಳ ನದಿ ತೀರದ ವ್ಯಾಪ್ತಿಯಲ್ಲಿ ರೈತರ ಜಮೀನುಗಳಲ್ಲಿ ನೀರು ನಿಂತುಕೊಂಡಿದೆ. ಕೃಷಿ ಅಧಿಕಾರಿಗಳು, ಗ್ರಾಮ ಸೇವಕರು ಪರಿಶೀಲಿಸಿ ಸರ್ಕಾರದ ಮಾರ್ಗಸೂಚಿ ಅನ್ವಯ ಸರ್ವೇ ಕಾರ್ಯ ಕೈಗೊಂಡು, ಸರ್ಕಾರಕ್ಕೆ ವರದಿ ಒಪ್ಪಿಸಲಾಗುತ್ತದೆ ಎಂದು ಚಿಕ್ಕೋಡಿ ಕೃಷಿ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.