ಚಿಕ್ಕೋಡಿ: ಹಿಡಕಲ್ ಜಲಾಶಯದಿಂದ ಹೊರ ಬಿಡಲಾಗುತ್ತಿರುವ ನೀರಿನಿಂದ ಗೋಕಾಕ್‌ನಗರ ಸಂಪೂರ್ಣ ಜಲಾವೃತಗೊಂಡಿದೆ. ಗೋಕಾಕ್ ನಗರದ ಹೆಬ್ಬಾಳ ಗಲ್ಲಿಯ ನೂರಾರು ಮನೆಗಳು ಧರೆಗುರುಳಿವೆ. ಸೂರು ಕಳೆದುಕೊಂಡಿರುವ ಜನರನ್ನು ಪರಿಹಾರ ಕೇಂದ್ರಕ್ಕೆ ರವಾನಿಸಲಾಗಿದ್ದು, ನೂರಾರು ಕುಟುಂಬಗಳಲ್ಲಿ ಆತಂಕ ಮನೆ ಮಾಡಿದೆ.
ಇತ್ತ ಚಿಕ್ಕೋಡಿ ತಾಲೂಕಿನ ಯಡೂರ ಗ್ರಾಮಸ್ಥರು, ಎಲ್ಲಿ ನೋಡಿದರೂ ನೀರು ಕಾಣುತ್ತಿದೆ. ಯಾವ ಕಡೆ ಹೋಗಬೇಕೆನ್ನುವುದೂ ತೋಚುತ್ತಿಲ್ಲ. ನಮ್ಮನ್ನ ಇಲ್ಲಿಂದ ಪಾರು ಮಾಡಿ ಎಂದು ಬೇಡಿಕೊಳ್ಳುತ್ತಿದ್ದಾರೆ.
ಯಡೂರ ಗ್ರಾಮದ ನಡುಗಡ್ಡೆಯ ಜನರು ಕಳೆದ ನಾಲ್ಕು ದಿನಗಳಿಂದ ಬೋಟ್ ಬರುವಿಕೆಗೆ ದಾರಿ ಕಾಯುತ್ತಿದ್ದಾರೆ. ದಿನದಿಂದ ದಿನಕ್ಕೆ ನದಿಯ ಪ್ರವಾಹ ಹೆಚ್ಚುತ್ತಿದ್ದು, ಜಿಲ್ಲಾಡಳಿತ ಮಾತ್ರ ಇತ್ತ ಕಡೆ ಒಂದು ಬೋಟ್ ಸಹ ಕಳುಹಿಸಿಲ್ಲ. ಹೊರಗೆ ಬಾರಲು ದಾರಿ ಇಲ್ಲದೆ ಪರದಾಡುತ್ತಿದ್ದೇವೆ. ಬೋಟ್ ಕಳುಹಿಸಿ ನಮ್ಮನ್ನ ರಕ್ಷಣೆ ಮಾಡಿ ಎಂದು ಯಡೂರ ಗ್ರಾಮದ ಜನ ಮನವಿ ಮಾಡಿದ್ದಾರೆ.
ಇನ್ನು ನವಿಲುತೀರ್ಥ ಜಲಾಶಯದಿಂದ ಏಕಾಏಕಿ ಹೊರಬಿಟ್ಟ ನೀರಿನಿಂದ ಸವದತ್ತಿ ತಾಲೂಕಿನ ಮುನವಳ್ಳಿಯಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಕುಮಾರೇಶ್ವರ ಆರೂರು ಮಠದಲ್ಲಿ 3 ಜನ ಸಿಲುಕಿಕೊಂಡಿದ್ದು, ರಕ್ಷಣೆಗಾಗೆ ಬೆಳಗಾವಿಯ ಎಂಎಲ್ಐಆರ್ಸಿ ಹಾಗೂ ಎನ್ಡಿಆರ್ಎಫ್ ತಂಡ ಮುನವಳ್ಳಿಗೆ ಆಗಮಿಸಿದೆ. ಸಂಗಯ್ಯ ಕಂತಿಮಠ, ಶಾಂತಯ್ಯ ಕಂತಿಮಠ, ದೇವಯ್ಯ ಹಿರೇಮಠ ಎಂಬುವರು ಪ್ರವಾಹದಲ್ಲಿ ಸಿಲುಕಿಕೊಂಡಿದ್ದು, ಶಾಸಕ ಆನಂದ ಮಾಮನಿ ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದಾರೆ.