ಬೆಂಗಳೂರು: ಪಾದರಾಯನಪುರ ಕಾರ್ಪೊರೇಟರ್ ಇಮ್ರಾನ್ ಪಾಷಾಗೆ ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ, ಶಾಸಕ ಜಮೀರ್ ಅಹ್ಮದ್ ಖಾನ್ ಕೂಡ ಕೊವಿಡ್-19 ಪರೀಕ್ಷೆಗೆ ಒಳಗಾಗಿದ್ದರು. ಜಮೀರ್ ಅವರ ವರದಿ ನೆಗೆಟಿವ್ ಬಂದಿದ್ದರೂ ಕ್ವಾರಂಟೈನ್ ಆಗುವ ಸಾಧ್ಯತೆ ಇದೆ.
ಪಾಷಾ ಅವರ ಜೊತೆ ಜಮೀರ್ ಕೆಲವು ದಿನಗಳಿಂದ ಪಾದರಾಯನಪುರದಲ್ಲಿ ಓಡಾಡಿದ್ದಾರೆ. ಅಲ್ಲದೆ ಕಾರ್ಪೋರೆಟರ್ ಪ್ರಾಥಮಿಕ ಸಂಪರ್ಕದಲ್ಲಿದ್ದರು. ಪಾಷಾ ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ಕಳಿಸುವ ವೇಳೆ ಜಮೀರ್ ಸ್ಥಳದಲ್ಲೇ ಇದ್ದರು. ಆದ ಕಾರಣ, ಜಮೀರ್ ಅಹಮದ್ ಅವರನ್ನು ಕ್ವಾರಂಟೈನ್ ಮಾಡುವ ಸಾಧ್ಯತೆ ಇದೆ.
ಬಿರಿಯಾನಿ ಊಟ ಹಾಕಿಸಿದ್ದ ಪಾಷಾ: ಇದರೊಂದಿಗೆ ಕಳೆದ ಸೊಮವಾರ ರಂಜಾನ್ ಹಬ್ಬದ ಪ್ರಯುಕ್ತ, ಪಾಷಾ ಅವರು ಪೊಲೀಸರಿಗೆ ಬಿರಿಯಾನಿ ಊಟ ಹಾಕಿಸಿದ್ದರು. ಅವರೇ ಮುಂದೆ ನಿಂತು ಊಟ ಬಡಿಸಿದ್ದರು. ಬಿರಿಯಾನಿ ತಿಂದವರು ಹಾಗೂ ಪಾಷಾ ಅವರ ಸಹೋದರನಿಗೂ ಕ್ವಾರಂಟೈನ್ ಭೀತಿ ಎದುರಾಗಿದೆ.
ಕಾರ್ಪೊರೇಟರ್ ತಂದೆಗೂ ಸೋಂಕಿನ ಭೀತಿ: ನಿನ್ನೆ ಪಾದರಾಯನಪುರ 11ನೇ ಕ್ರಾಸ್ ನಲ್ಲಿ ಕಂಟೈನ್ಮೆಂಟ್ ತೆರವು ಮಾಡಬೇಕೆಂದು ಆಗ್ರಹಿಸಿ ಪ್ರತಿಭಟನೆ ಮಾಡುತ್ತಿದ್ದ ಸ್ಥಳಕ್ಕೆ ಕಾರ್ಪೋರೇಟರ್ ಪಾಷಾ ತಂದೆ ಹೋಗಿದ್ದರು. ಈಗ ಅವರಿಗೂ ಕೊರೊನಾ ಭೀತಿ ಎದುರಾಗಿದೆ. ಈ ಬಗ್ಗೆ ಆರೋಗ್ಯ ಇಲಾಖೆ ಯಾವ ಕ್ರಮ ಕೈಗೊಳ್ಳುತ್ತೆ ಎಂದು ಕಾದು ನೋಡಬೇಕು.