ಬೆಂಗಳೂರು : ಮಾಜಿ ಸಿಎಂ ಕುಮಾರಸ್ವಾಮಿಗೆ ಅಧಿಕಾರ ಸಿಕ್ಕರೆ ಪಲ್ಟಿ ಹೊಡೆಯುತ್ತಾರೆ. ಅವರಿಗೆ ಯಾವುದೇ ರಾಜಕೀಯ ಸಿದ್ಧಾಂತ ಇಲ್ಲ ಎಂದು ಮಾಜಿ ಸಚಿವ ಜಮೀರ್ ಅಹ್ಮದ್ ಖಾನ್ ಕಿಡಿಕಾರಿದ್ದಾರೆ. ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಶಾಸಕ ಜಮೀರ್ ಅಹಮದ್ ಅವರು, ಮಾಜಿ ಸಿಎಂ ಹೆಚ್‌ಡಿಕೆ ವಿರುದ್ಧ ವ್ಯಂಗ್ಯವಾಡಿದ್ದಾರೆ.
ಮಾಜಿ ಪ್ರಧಾನಿ ದೇವೇಗೌಡರು ಅಂತವರಲ್ಲ. ಅವರು ಸೆಕ್ಯೂಲರ್ ಸಿದ್ಧಾಂತದವರು. ಆದರೆ, ಕುಮಾರಸ್ವಾಮಿಗೆ ಯಾವ ಸಿದ್ಧಾಂತವೂ ಇಲ್ಲ. ಹಣ,ಅಧಿಕಾರ ಸಿಕ್ಕರೆ ಎಲ್ಲಿಗೆ ಬೇಕಾದ್ರೂ ಹೋಗ್ತಾರೆ. ಅಧಿಕಾರ ಸಿಕ್ಕರೆ ಯಾರ ಕಾಲು ಬೇಕಾದ್ರೂ ಹಿಡಿಯುತ್ತಾರೆ. ಪದೇಪದೆ ಸಿಎಂ ಹತ್ರ ಯಾಕೆ ಹೋಗಬೇಕು? ಕುಮಾರಸ್ವಾಮಿ ಪಲ್ಟಿ ಗಿರಾಕಿ, ಯಾವಾಗ ಎಲ್ಲಿ ಬೇಕಾದ್ರೂ ಪಲ್ಟಿ ಹೊಡೆಯುತ್ತಾರೆ ಎಂದರು.
ಜೆಡಿಎಸ್‌ಗೆ ರಾಜ್ಯದಲ್ಲಿ ಎಲ್ಲಿಯೂ ನೆಲೆ ಇಲ್ಲ. ಬಸವಕಲ್ಯಾಣದಲ್ಲಿ ಅಭ್ಯರ್ಥಿ ಕಣಕ್ಕಿಳಿಸಿ ನಮ್ಮ ಅಭ್ಯರ್ಥಿ ಸೋತರು. ಮಂಡ್ಯ, ತುಮಕೂರು ಲೋಕಸಭೆ, ಕೆಆರ್‌ಪೇಟೆ, ಶಿರಾ ವಿಧಾನಸಭೆ ಉಪಚುನಾವಣೆ ಎಲ್ಲಿಯೂ ಗೆಲ್ಲಲಾಗದ ಮೇಲೆ ಬಸವಕಲ್ಯಾಣದಲ್ಲಿ ಏಕೆ ಅಭ್ಯರ್ಥಿ ಕಣಕ್ಕಿಳಿಸಿದರು. ಇವರು ಗೆಲ್ಲುವ ಪಕ್ಷವಾಗಿ ಉಳಿದಿಲ್ಲ. ನಾನು ಜೆಡಿಎಸ್ನಲ್ಲೇ ಇದ್ದವನು. ಅವರು ಅಧಿಕಾರಕ್ಕೋಸ್ಕರ ಏನು ಬೇಕಾದರೂ ಮಾಡ್ತಾರೆ ಎಂದರು.
‘ಅಧಿಕಾರ ಬೇಕಾದರೆ ಯಾರ ಕಾಲಿಗೆ ಬೇಕಾದರೂ ಬೀಳುತ್ತಾನೆ’
ಕುಮಾರಸ್ವಾಮಿ ಲಾಭಕ್ಕಾಗಿ ಪಲ್ಟಿ ಹೊಡೆಯುತ್ತಾರೆ. ಅವರಿಗೆ ಅಧಿಕಾರ ಬೇಕು. ಕುಮಾರಸ್ವಾಮಿ, ಅಧಿಕಾರ, ಹಣಕ್ಕೋಸ್ಕರ ಏನು ಮಾಡಲು ಬೇಕಾದರೂ ಸಿದ್ಧ. ಅವನನ್ನು ದಿನದಲ್ಲಿ 16 ಗಂಟೆ ಹತ್ತಿರದಲ್ಲಿ ಇದ್ದು ನೋಡಿದವನು ನಾನು. ಅವನಿಗೆ ಯಾವ ಸಿದ್ಧಾಂತ, ಸೆಕ್ಯೂಲರಿಸಂ ಇಲ್ಲ. ಕೇವಲ ಹಣ ಬೇಕು. ಅವನಿಗೆ ಅಧಿಕಾರ ಬೇಕಾದರೆ ಯಾರ ಕಾಲಿಗೆ ಬೇಕಾದರೂ ಬೀಳುತ್ತಾನೆ ಎಂದು ಏಕವಚನದಲ್ಲಿ ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದರು.
ಕುಮಾರಸ್ವಾಮಿ ತಪ್ಪಿನಿಂದಾಗಿ ಬಿಜೆಪಿ ಸರ್ಕಾರ ಬಂತು. ಕೇವಲ ಅನುಕಂಪದಿಂದಾಗಿ 2008ರಲ್ಲಿ ಬಿಜೆಪಿ ಸರ್ಕಾರ ಬಂತು. ಅಂದು ಸಹ ಸಂಪೂರ್ಣ ಬಹುಮತ ಬರಲಿಲ್ಲ. ಆಗ ಸಹ 110 ಸ್ಥಾನ ಬಂತು. ಆಮೇಲೆ ಆಪರೇಷನ್ ಕಮಲ ಮಾಡಿ ಸರ್ಕಾರ ರಚಿಸಿದರು. 2018ರಲ್ಲಿ ಕೇವಲ 104 ಸ್ಥಾನ ಬಂದಿತ್ತು. ಮತ್ತೆ ನಮ್ಮ ಶಾಸಕರನ್ನು ಸೆಳೆದು ಸರ್ಕಾರ ಮಾಡಿ ಜನರ ಶಾಪ ಪಡೆಯುತ್ತಿದ್ದಾರೆ. ಜನ ಶಾಪ ಹಾಕುತ್ತಿದ್ದಾರೆ.
‘ಸಿದ್ದರಾಮಯ್ಯ ಅವರೇ ಮುಂದಿನ ಸಿಎಂ’
ಕೆಟ್ಟಕೆಟ್ಟದಾಗಿ ಹೆಣ್ಣು ಮಕ್ಕಳು ಮಾತನಾಡುತ್ತಿದ್ದಾರೆ. ಕರ್ನಾಟಕ ರಾಜ್ಯದಲ್ಲಿ ನಿಮಗೆ ಯಾವತ್ತೂ ಜನ ಬೆಂಬಲ ಕೊಟ್ಟಿಲ್ಲ. ಹಿಂಬಾಗಿಲಿನಿಂದ ನೀವು ಅಧಿಕಾರಕ್ಕೆ ಬಂದಿದ್ದು, ಸಂಪೂರ್ಣ ಬಹುಮತ ಬರಲು ಸಾಧ್ಯವಿಲ್ಲ, ರಾಜ್ಯದ ಜನರಿಗೆ ನಿಮ್ಮ ಬಗ್ಗೆ ತಿಳಿದು ಹೋಗಿದೆ. ರಾಜ್ಯದೆಲ್ಲೆಡೆ ಜನ ತಪ್ಪು ಮಾಡಿದ್ದೇವೆ ಎನ್ನುತ್ತಿದ್ದಾರೆ ಎಂದರು.
ಸಿದ್ದರಾಮಯ್ಯನವರೇ ಮುಖ್ಯಮಂತ್ರಿಯಾಗಬೇಕು. ನಾನು ಪದೇಪದೆ ಅದನ್ನೇ ಹೇಳಿದ್ದೇನೆ. ಇವತ್ತಿಗೂ ನನ್ನ ಅಭಿಪ್ರಾಯ ಸಿದ್ದರಾಮಯ್ಯ ಸಿಎಂ ಆಗಬೇಕು. ಇದು ನಾನು ಹೇಳಿರೋದಲ್ಲ ಜನರೇ ಹೇಳಿದ್ದಾರೆ. ಅವರು ಕೊಟ್ಟ ಕೆಲಸ ಜನ ಗುರ್ತಿಸುತ್ತಿದ್ದಾರೆ. ಹೀಗಾಗಿ, ಸಿದ್ದರಾಮಯ್ಯ ಅವರೇ ಸಿಎಂ ಆಗಬೇಕು ಎಂದಿದ್ದಾರೆ.