ಬೆಂಗಳೂರು: ಕೇಂದ್ರ ಸರ್ಕಾರ ಮಟ್ಟದ ಉನ್ನತ ಹುದ್ದೆ ಪಡೆಯಲು ವಂಚಕ ಯುವರಾಜ್ ಸ್ವಾಮಿಗೆ ಲಂಚ ನೀಡಿದ ಆರೋಪ ಸಂಬಂಧ ಸಿಬಿಐಗೆ ವರ್ಗಾವಣೆಗೊಂಡಿದ್ದ ಪ್ರಕರಣ ಈಗ ಎಸಿಬಿಗೆ ವರ್ಗಾವಣೆಯಾಗಿದೆ. ಎಸಿಬಿಯಲ್ಲಿ ಈ ಸಂಬಂಧ ಎಫ್ಐಆರ್ ಕೂಡ ದಾಖಲಾಗಿದೆ.
ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ವಂಚಕ ಯುವರಾಜ್ ಸ್ವಾಮಿಗೆ ಲಂಚ ನೀಡಿದ ಆರೋಪದಡಿ ಎನಿತ್ ಕುಮಾರ್ ಎಂಬಾತನ ಮೇಲೆ ಪ್ರಕರಣ ದಾಖಲಿಸಿಕೊಂಡು ಎಸಿಬಿ ಅಧಿಕಾರಿಗಳು ತನಿಖೆ ಕೈಗೊಂಡಿದ್ದಾರೆ.
ಎನಿತ್ ಕುಮಾರ್ ಕೇಂದ್ರ ರೇಷ್ಮೆ ಮಂಡಳಿಯಲ್ಲಿ ಕೆಲಸ ಪಡೆಯಲು ಕಳೆದ ವರ್ಷ ಯುವರಾಜ್ ಸ್ವಾಮಿಗೆ 30 ಲಕ್ಷ ಹಣ ನೀಡಿದ್ದರು ಎನ್ನಲಾಗ್ತಿದೆ. ಈ ಸಂಬಂಧ ಲಂಚ ನೀಡಿದವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಸಾಮಾಜಿಕ ಕಾರ್ಯಕರ್ತ ಆದರ್ಶ ಆರ್.ಐಯರ್ ಎಂಬುವರು ಎಸಿಬಿಗೆ ದೂರು ನೀಡಿದ್ದರು. ದೂರು ಪರಿಶೀಲಿಸಿದ್ದ ಅಧಿಕಾರಿಗಳು ಕೇಂದ್ರ ಮಟ್ಟದ ಹುದ್ದೆಗೆ ರಾಜ್ಯ ಭ್ರಷ್ಟಾಚಾರ ನಿಗ್ರಹದಳ ವ್ಯಾಪ್ತಿಗೆ ಬರದ ಕಾರಣ ಸಿಬಿಐಗೆ ದೂರನ್ನು ವರ್ಗಾವಣೆ ಮಾಡಲಾಗಿತ್ತು.
ಇದನ್ನೂ ಓದಿ: ದಾವಣೆಗೆರೆಯ ಎಸ್ ಎಸ್ ಆಸ್ಪತ್ರೆಗೆ ವಿದ್ಯಾರ್ಥಿ ನವೀನ್ ದೇಹದಾನ.. ಕರುಳ ಕುಡಿಗೆ ಕೊನೆಯ ಮುತ್ತಿಟ್ಟ ಅಮ್ಮ..
ಸರ್ಕಾರಿ ಹುದ್ದೆ ಗಿಟ್ಟಿಸಿಕೊಳ್ಳಲು ಯುವರಾಜ್ಗೆ ಈ ಹಿಂದೆ ಲಂಚ ನೀಡಿದ್ದ ಐದು ಮಂದಿ ವಿರುದ್ಧ ಸಾಮಾಜಿಕ ಕಾರ್ಯಕರ್ತ ಆದರ್ಶ್ ಅವರು ದೂರು ನೀಡಿದ್ದರು. ಈ ಪೈಕಿ ಮೂವರಾದ ಕೆ.ಪಿ ಸುಧೀಂದ್ರ ರೆಡ್ಡಿ, ಗೋವಿಂದಯ್ಯ, ಜಿ.ನರಸಿಂಹ ಸ್ವಾಮಿ ವಿರುದ್ಧ ಎಸಿಬಿ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡಿದ್ದರು. ಇನ್ನಿಬ್ಬರಾದ ನಿವೃತ್ತ ಜಡ್ಜ್ ಹಾಗೂ ಎನಿತ್ ಕುಮಾರ್ ವಿರುದ್ಧ ಎಸಿಬಿ ಪ್ರಕರಣ ದಾಖಲಿಸಿಕೊಂಡಿರಲಿಲ್ಲ. ಈ ಸಂಬಂಧ ದೂರುದಾರರಿಗೆ ಸಿಬಿಐಗೆ ದೂರನ್ನು ವರ್ಗಾಯಿಸಿರುವುದಾಗಿ ಎಸಿಬಿ ತಿಳಿಸಿತ್ತು.
ಇದೀಗ ಸಿಬಿಐಯಿಂದ ಪ್ರಕರಣ ಮತ್ತೆ ಎಸಿಬಿಗೆ ವರ್ಗವಾಗಿದ್ದರ ಪರಿಣಾಮ ಎಸಿಬಿ ಆಧಿಕಾರಿಗಳು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
ಈ ಮೂಲಕ ಬಿಜೆಪಿ ಹಾಗೂ RSS ನಾಯಕರ ಹೆಸರು ಹೇಳಿ ಯುವರಾಜ್ ಗೆ ಹಣ ನೀಡಿ ಕೈ ಸುಟ್ಟುಕೊಂಡು ವಂಚನೆಗೊಳಗಿದ್ದವನಿಗೆ ಸಂಕಷ್ಟ ಎದುರಾಗಿದೆ.