ಬೆಂಗಳೂರು: ಕೋಟ್ಯಂತರ ರೂ. ವಂಚನೆ ಆರೋಪದಡಿ ಬಂಧಿತನಾಗಿರುವ ಆರೋಪಿ ಯುವರಾಜನ ಮೋಸದ ಜಾಲ ಬಗೆದಷ್ಟು ಬಯಲಾಗುತ್ತಿದೆ. ರಾಜಕಾರಣಿಗಳು, ಸರ್ಕಾರಿ ಅಧಿಕಾರಿಗಳು ಹಾಗೂ ನಿವೃತ್ತ ಜಡ್ಜ್ ಸೇರಿದಂತೆ ವಿವಿಧ ವರ್ಗದ ಜನರನ್ನು ವಂಚಿಸುತ್ತಿದ್ದ ವಂಚಕನನ್ನು ಐದು ದಿನಗಳ ಕಾಲ ಸಿಸಿಬಿ ವಶಕ್ಕೆ ಪಡೆದುಕೊಂಡಿದೆ.
ಯುವರಾಜ್ ಮೂಲತಃ ಶಿವಮೊಗ್ಗದವನಾಗಿದ್ದು, ಹಲವು ವರ್ಷಗಳಿಂದ ಬೆಂಗಳೂರಿನಲ್ಲಿ ನೆಲೆಸಿದ್ದ. ತಾನು ಆರ್ಎಸ್ಎಸ್ ನಲ್ಲಿ ಟಾಪ್ ಲೀಡರ್ ಎಂದು ಬಿಂಬಿಸಿಕೊಳ್ಳುತಿದ್ದ. ಇದಕ್ಕಾಗಿ ಆರ್ಎಸ್ಎಸ್ ಹಾಗೂ ಬಿಜೆಪಿ ಹಿರಿಯ ನಾಯಕರ ರೀತಿಯಲ್ಲೆ ವೇಷಭೂಷಣ ಮಾಡಿಕೊಳ್ಳುತಿದ್ದ. ಎಲ್ಲರೂ ನನಗೆ ಪರಿಚಯವಿದ್ದಾರೆ. ನಾವು ಅವರ ಬಳಿ ಕೆಲಸ ಮಾಡಿಸಿಕೊಡುತ್ತೇನೆ ಎಂದು ಹೇಳಿಕೊಳ್ಳುತಿದ್ದ.
ಆರೋಪಿ ಯುವರಾಜ ಸಿಸಿಬಿ ವಶ
ವಿಮಾನ ಮಾರ್ಗವಾಗಿ ಅತಿ ಹೆಚ್ಚು ಬೆಂಗಳೂರು - ದೆಹಲಿ ನಡುವೆ ಸಂಚರಿಸುವ ಪ್ರಯಾಣಿಕರನ್ನು ಗುರಿಯಾಗಿಸಿಕೊಂಡು ಪರಿಚಯಿಸಿಕೊಂಡು ತಾನು ಪ್ರಭಾವಿ ಎಂದು ನಂಬಿಸುತ್ತಿದ್ದ. ನಂಬಿಕೆಗಳಿಸಿದ ಬಳಿಕ ಸರ್ಕಾರದ ಮಟ್ಟದಲ್ಲಿ ಕೆಲಸ ಕಾರ್ಯ ಮಾಡಿಕೊಡುತ್ತೇನೆ ಎಂದು ವಂಚಿಸುತಿದ್ದ. ಅದೇ ರೀತಿ ಐಎಎಸ್, ಐಪಿಎಸ್ ಹಾಗೂ ಕೆಎಎಸ್ ಅಧಿಕಾರಿಗಳಿಗೆ ಹೇಳುವ ಜಾಗಕ್ಕೆ ಪೋಸ್ಟಿಂಗ್ ಕೊಡಿಸುವುದಾಗಿ ನಂಬಿಸಿ ಹಣ ವಸೂಲಿ ಮಾಡುತ್ತಿದ್ದ. ವರ್ಗಾವಣೆ ಮಾಡಿಸದೇ ಹಣವೂ ನೀಡದೆ ಸತಾಯಿಸುತ್ತಿದ್ದ. ಕೆಲ ರಾಜಕಾರಣಿಗಳಿಗೆ ನಿಗಮ ಮಂಡಳಿ ಕೊಡಿಸುತ್ತೇನೆ ಎಂದು ನಂಬಿಸಿ ಹಣ ವಂಚಿಸಿದ್ದ ಎಂಬುವುದು ವಿಚಾರಣೆ ವೇಳೆ ತಿಳಿದು ಬಂದಿದೆ.
ರಾಜ್ಯಪಾಲೆ ಮಾಡ್ತೀನಿ ಎಂದು ನಿವೃತ್ತ ಮಹಿಳಾ ಜಡ್ಜ್ ನಿಂದ ಕೋಟ್ಯಂತರ ರೂ.ಪಡೆದು ವಂಚನೆ
ನಿವೃತ್ತ ಮಹಿಳಾ ಜಡ್ಜ್ ಅವರನ್ನು ಕಳೆದ ಎಂಟು ತಿಂಗಳ ಹಿಂದೆ ಸಂಪರ್ಕ ಮಾಡಿ ರಾಜ್ಯವೊಂದರ ರಾಜ್ಯಪಾಲೆಯಾಗಿ ಮಾಡಿಸುತ್ತೇನೆ ಎಂದು ನಂಬಿಸಿದ್ದ. ಬಳಿಕ ಆಕೆಯ ಬಳಿಯಿಂದ ಕೋಟ್ಯಂತರ ರೂ. ಹಣ ಪಡೆದಿದ್ದ ಎನ್ನಲಾಗಿದೆ.
ನಿಗಮ ಮಂಡಳಿ ಕೊಡಿಸುವುದಾಗಿ ಕೆಲ ರಾಜಕಾರಣಿಗಳನ್ನು ಕೇಂದ್ರ ಬಿಜೆಪಿ ನಾಯಕರ ಕಚೇರಿಗಳಿಗೆ ಯುವರಾಜ್ ಕರೆದೊಯ್ದುತ್ತಿದ್ದ. ಬಳಿಕ ಅವರ ಕಚೇರಿಯ ಒಂದು ಕಡೆ ಕೂರಿಸಿ ತಾನು ಒಳ ಹೋಗುತಿದ್ದ. ಸ್ವಲ್ಪ ಸಮಯದ ನಂತರ ತಾನು ನಿಮ್ಮ ವಿಚಾರ ಮಾತನಾಡಿದ್ದೇನೆ ಕೆಲಸ ಆಗುತ್ತೆ ಎಂದು ಹೇಳಿ ಹಣ ಪೀಕುತ್ತಿದ್ದ ಎನ್ನಲಾಗಿದೆ.
ಸದ್ಯ ಆರೋಪಿ ಯುವರಾಜ್ ನನ್ನು ವಸಂತ ನಗರದಲ್ಲಿರುವ ವರ್ಚುಯಲ್ ಕೋರ್ಟ್ಗೆ ಹಾಜರುಪಡಿಸಿ ನ್ಯಾಯಾಲಯದ ಸೂಚನೆ ಮೇರೆಗೆ ಐದು ದಿನಗಳ ಕಾಲ ಸಿಸಿಬಿ ಪೊಲೀಸರು ವಶಕ್ಕೆ ಪಡೆದುಕೊಂಡು ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ.