ಬೆಂಗಳೂರು: ಕೆಪಿಸಿಸಿ ಅಧ್ಯಕ್ಷರ ಗಮನಕ್ಕೆ ಬಾರದೇ ಉಸ್ತುವಾರಿಗಳನ್ನು ನೇಮಿಸಿಕೊಂಡಿರುವ ಯುವ ಕಾಂಗ್ರೆಸ್ ಅಧ್ಯಕ್ಷ ಬಸನಗೌಡ ಬಾದರ್ಲಿ ಇದೀಗ ಡಿಕೆಶಿ ಕೆಂಗಣ್ಣಿಗೆ ಗುರಿಯಾಗಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ.
ಪಕ್ಷದ ರಾಜ್ಯಾಧ್ಯಕ್ಷರಾಗಿ ತಮ್ಮದೇ ಆದ ತಂಡ ಕಟ್ಟುವ ಆಶಯ ಹೊಂದಿರುವ ಡಿ.ಕೆ. ಶಿವಕುಮಾರ್, ಇತ್ತೀಚೆಗೆ ವೇದಿಕೆಯೊಂದರಲ್ಲಿ ಮಾತನಾಡಿದ ವೇಳೆ ಯುವ ಕಾಂಗ್ರೆಸ್ ಅಷ್ಟಾಗಿ ಉತ್ತಮ ಕಾರ್ಯ ನಿರ್ವಹಿಸುತ್ತಿಲ್ಲ ಎಂದು ಹೇಳಿದ್ದರು. ಈ ಮಧ್ಯೆ ಇವರಿಗೆ ತಿಳಿಸದೇ ಬಾದರ್ಲಿ ಉಸ್ತುವಾರಿಗಳನ್ನು ನೇಮಿಸಿ ಇಕ್ಕಟ್ಟಿಗೆ ಸಿಲುಕಿದ್ದಾರೆ. ನಿನ್ನೆ ಇದೇ ವಿಚಾರ ಚರ್ಚೆಗೆ ಡಿಕೆಶಿ ತಮ್ಮ ಮನೆಗೆ ಬಸನಗೌಡ ಬಾದರ್ಲಿಯನ್ನು ಕರೆಸಿ ಚರ್ಚಿಸಿದ್ದಾರೆ. ಮಾಹಿತಿ ಪ್ರಕಾರ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ಕೂಡ ಬದಲಾಗಲಿದೆ ಎಂಬ ಮಾತು ಕೇಳಿಬರುತ್ತಿದೆ. ಮೂರು ವರ್ಷ ಕಾಲಾವಧಿಗೆ ಸಾಮಾನ್ಯವಾಗಿ ಪ್ರತಿ ಘಟಕದ ಅಧ್ಯಕ್ಷರ ಅಧಿಕಾರಾವಧಿ ಇರುತ್ತದೆ. 2017ರ ಮೇ 23ರಂದು ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಸಿಂಧನೂರು ಮೂಲದ ಬಸನಗೌಡ ಬಾದರ್ಲಿ ಆಯ್ಕೆಯಾಗಿದ್ದರು. ಅಂದು ಚುನಾವಣೆ ವ್ಯವಸ್ಥೆ ಇತ್ತು. ಸಾಕಷ್ಟು ಯುವ ನಾಯಕರನ್ನು ಮಣಿಸಿ ಇವರು ಗೆದ್ದಿದ್ದರು.
ಈ ಸಾರಿ ಚುನಾವಣೆ ಇಲ್ಲ:
ಆದರೆ, ಈಗ ಚುನಾವಣೆ ಅಗತ್ಯವಿಲ್ಲ. ಅಲ್ಲದೇ 35 ವರ್ಷ ಒಳಗಿನ ನಾಯಕರು ಯುವ ಕಾಂಗ್ರೆಸ್ ಅಧ್ಯಕ್ಷರಾಗಬೇಕಿದೆ. ಈ ನಿಟ್ಟಿನಲ್ಲಿ ಡಿಕೆಶಿ ಯುವ ಕಾಂಗ್ರೆಸ್ಗೆ ನೂತನ ಸಾರಥಿ ನೇಮಕಕ್ಕೆ ಮುಂದಾಗಿದ್ದಾರೆ. ಬಹುತೇಕ ಈ ರೇಸ್ನಲ್ಲಿ ಮಾಜಿ ಗೃಹ ಸಚಿವ ರಾಮಲಿಂಗರೆಡ್ಡಿ ಪುತ್ರಿ ಹಾಗೂ ಶಾಸಕಿ ಸೌಮ್ಯ ರೆಡ್ಡಿ ಮುಂಚೂಣಿಯಲ್ಲಿ ನಿಲ್ಲಲಿದ್ದಾರೆ. ಬಹುದಿನದಿಂದ ಯುವ ಕಾಂಗ್ರೆಸ್ ಅಧ್ಯಕ್ಷರಾಗುವ ಕನಸು ಕಾಣುತ್ತಿರುವ ಮೊಹಮ್ಮದ್ ನಲಪಾಡ್ ಹ್ಯಾರಿಸ್ ಕೂಡ ಪ್ರಬಲ ಸ್ಪರ್ಧಿ. ಇವರ ಜತೆ ಡಿಕೆಶಿ ಜತೆಯೇ ಗುರುತಿಸಿಕೊಂಡಿರುವ ಯುವ ನಾಯಕ ಹಾಗೂ ಮಹಾಲಕ್ಷ್ಮಿ ಲೇಔಟ್ ವಿಧಾನಸಭೆ ಕ್ಷೇತ್ರಕ್ಕೆ ಹಿಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಮಂಜುನಾಥ್ ಕೂಡ ಆಕಾಂಕ್ಷಿ ಪಟ್ಟಿಯಲ್ಲಿದ್ದಾರೆ. ಇನ್ನು ತುಮಕೂರಿನ ಕಾಂಗ್ರೆಸ್ ಮುಖಂಡ ಕೆ. ಎನ್. ರಾಜಣ್ಣ ಪುತ್ರ ರಾಜೇಂದ್ರ ಹೆಸರು ಕೂಡ ಕೇಳಿಬರುತ್ತಿದ್ದು, ಅವರಿಗೆ ವಯಸ್ಸಿನ ಸಮಸ್ಯೆ ಆಯ್ಕೆಗೆ ಎದುರಾಗಬಹುದು ಎನ್ನಲಾಗುತ್ತಿದೆ.
ಹೊಸಬರೂ ಆಗಬಹುದು:
ಎನ್ ಎಸ್ ಯು ಐ ಮೂಲದಿಂದ ಬೆಳೆದುಬಂದಿರುವ ನಾಯಕ ಮಂಜುನಾಥ್. ಆದರೆ ಇವರನ್ನು ಆಯ್ಕೆ ಮಾಡೋದಕ್ಕೆ ಸಿದ್ದರಾಮಯ್ಯ ಬಣಕ್ಕೆ ಇಷ್ಟ ಇಲ್ಲ. ಸೌಮ್ಯ ರೆಡ್ಡಿ, ಹಾಲಿ ಶಾಸಕಿ ಹಾಗೂ ಮಹಿಳೆಯರನ್ನು ಆಯ್ಕೆ ಮಾಡಿದರೆ ಓಡಾಡಿಕೊಂಡಿರುವುದು ಕಷ್ಟ ಎಂಬ ಅಭಿಪ್ರಾಯ ಇದೆ. ಇನ್ನು ನಲಪಾಡ್ ಬಗೆಗೂ ಒಳ್ಳೆ ಹೆಸರಿಲ್ಲ. ಆದ್ದರಿಂದ ಇವರೆಲ್ಲರನ್ನೂ ಬಿಟ್ಟು ಹೊಸ ಯುವ ನಾಯಕನನ್ನು ಆಯ್ಕೆ ಮಾಡಿ ಅಧ್ಯಕ್ಷ ಪಟ್ಟ ನೀಡುವ ಸಾಧ್ಯತೆಯನ್ನೂ ಅಲ್ಲಗಳೆಯಲು ಸಾಧ್ಯವಿಲ್ಲ.
ಇನ್ನೇನು ಕೆಲವೇ ದಿನಗಳಲ್ಲಿ ವಿವಿಧ ವಿಭಾಗಗಳಿಗೆ ಪದಾಧಿಕಾರಿಗಳ ಆಯ್ಕೆ ಆರಂಭವಾಗಲಿದೆ. ಕೆಲ ಕಡೆ ಬದಲಾವಣೆ ಅಗುವುದು ಸಹಜ. ಇದೇ ಸಂದರ್ಭ ಡಿಕೆಶಿ ಹಾಗೂ ಅವರ ಕಾರ್ಯಾಧ್ಯಕ್ಷರ ತಂಡ ಹೊಸ ನಾಯಕನನ್ನು ಆಯ್ಕೆ ಮಾಡಿ ಯುವ ಕಾಂಗ್ರೆಸ್ ಪಟ್ಟ ಕಟ್ಟುವ ಸಾಧ್ಯತೆ ಇದೆ.