ಬೆಂಗಳೂರು : ಕುಡಿದ ಮತ್ತಿನಲ್ಲಿ ಕ್ಷುಲ್ಲಕ ಕಾರಣಕ್ಕಾಗಿ ನಡೆದ ಜಗಳದಲ್ಲಿ ವ್ಯಕ್ತಿಯೋರ್ವ ಸ್ನೇಹಿತನನ್ನು ಕೊಲೆ ಮಾಡಿ ಪೊಲೀಸರ ಮುಂದೆ ಶರಣಾಗಿರುವ ಘಟನೆ ಕೆಂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ ಕೊಮ್ಮಘಟ್ಟದಲ್ಲಿ ನಡೆದಿದೆ. ಕೊಮ್ಮಘಟ್ಟ ನಿವಾಸಿ ಚೇತನ್ ಮೃತ ದುರ್ದೈವಿ. ಸ್ನೇಹಿತ ಅಮಾನುಲ್ಲಾ ಕೊಲೆಗೈದ ಆರೋಪಿ.
ಮೃತ ಚೇತನ್ ಮತ್ತು ಅಮಾನುಲ್ಲಾ ಇಬ್ಬರು ಬಹುಕಾಲದ ಗೆಳೆಯರಾಗಿದ್ದು, ಒಂದೇ ಪ್ರದೇಶದ ನಿವಾಸಿಗಳು. ಸಣ್ಣಪುಟ್ಟ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಆಗಾಗ ಕ್ಷುಲ್ಲಕ ಕಾರಣಕ್ಕಾಗಿ ಜಗಳ ನಡೆಯುತ್ತಿತ್ತು. ಮಂಗಳವಾರ ರಾತ್ರಿ ಮತ್ತೆ ಗಲಾಟೆ ನಡೆದಿದೆ. ಪಾನಮತ್ತನಾಗಿದ್ದ ಅಮಾನುಲ್ಲಾ ಸೈಜುಗಲ್ಲನ್ನು ಚೇತನ್ ತಲೆ ಮೇಲೆ ಹಾಕಿ ಹತ್ಯೆ ಮಾಡಿದ್ದಾನೆ. ಬಳಿಕ ಸ್ಥಳದಿಂದ ಪರಾರಿಯಾಗಿದ್ದಾನೆ.
ಇಂದು ಬೆಳಗ್ಗೆ ಕೆಂಗೇರಿ ಪೊಲೀಸ್ ಠಾಣೆಗೆ ಹಾಜರಾದ ಅಮಾನುಲ್ಲಾ ಸ್ನೇಹಿತನನ್ನು ಕೊಲೆ ಮಾಡಿರುವುದಾಗಿ ಹೇಳಿದ್ದಾನೆ. ಈತನ ಮಾತಿನಂತೆ ಸ್ಥಳಕ್ಕೆ ಹೋಗಿ ಪರಿಶೀಲಿಸಿದ ಪೊಲೀಸರಿಗೆ ಚೇತನ್ ಕೊಲೆಯಾಗಿರುವ ಸಂಗತಿ ಬಯಲಿಗೆ ಬಂದಿದೆ. ಆರೋಪಿ ವಿರುದ್ಧ ಹತ್ಯೆ ಪ್ರಕರಣ ದಾಖಲಿಸಿ ಹೆಚ್ಚಿನ ವಿಚಾರಣೆಗೆ ನಡೆಸಲಾಗುತ್ತಿದೆ ಎಂದು ಪಶ್ಚಿಮ ವಿಭಾಗದ ಡಿಸಿಪಿ ಲಕ್ಷ್ಮಣ್ ನಿಂಬರಗಿ ತಿಳಿಸಿದ್ದಾರೆ.
ಸ್ನೇಹಿತನನ್ನು ಹತ್ಯೆಗೈದ ಗೆಳೆಯರು : ಮದ್ಯ ಸೇವನೆ ಮಾಡಿದ ವಿಚಾರವನ್ನು ತಂದೆಗೆ ಹೇಳಿದ್ದಕ್ಕೆ ಇಬ್ಬರು ಯುವಕರು ತಮ್ಮ ಸ್ನೇಹಿತನನ್ನೇ ಹತ್ಯೆ ಮಾಡಿದ್ದ ಘಟನೆ ಇತ್ತೀಚಿಗೆ ಹಾಸನದಲ್ಲಿ ನಡೆದಿತ್ತು. ಮೃತರನ್ನು ಹಾಸನ ತಾಲೂಕಿನ ಚಿಕ್ಕಗೆಣಿಗೆರೆ ಗ್ರಾಮದ ಪ್ರಕಾಶ್ ಎಂದು ಗುರುತಿಸಲಾಗಿತ್ತು. ಈ ಸಂಬಂಧ ಪುನೀತ್ ಮತ್ತು ಯಶವಂತ್ ಎಂಬವರನ್ನು ಹಾಸನ ಪೊಲೀಸರು ಬಂಧಿಸಿದ್ದರು.
ಕೊಲೆಯಾದ ಪ್ರಕಾಶ್, ಪುನೀತ್, ಯಶವಂತ್ ಮೂವರು ಸ್ನೇಹಿತರಾಗಿದ್ದು, ಒಟ್ಟಿಗೆ ಸೇರಿ ಮದ್ಯಪಾನ ಮಾಡುತ್ತಿದ್ದರು. ಇದೇ ವೇಳೆ ಪುನೀತ್ ಅವರ ತಂದೆಯ ಕರೆ ಬಂದಿದೆ.ಕರೆಯಲ್ಲಿ ನನ್ನ ಮಗ ಎಲ್ಲಿದ್ದಾನಪ್ಪ ಎಂದು ಕೇಳಿದ್ದಾರೆ. ಆಗ ಕುಡಿದ ಮತ್ತಿನಲ್ಲಿದ್ದ ಪ್ರಕಾಶ್, ನಿಮ್ಮ ಮಗ ಮದ್ಯ ಸೇವಿಸುತ್ತಿದ್ದಾನೆ ಎಂದು ಪುನೀತ್ ತಂದೆಗೆ ಹೇಳಿದ್ದನು.
ಇದರಿಂದ ಪುನೀತ್ ತಂದೆ ಕೋಪಗೊಂಡಿದ್ದರು. ಮದ್ಯಪಾನ ಮಾಡಿ ಮನೆಗೆ ಬಂದ ಪುನೀತ್ನನ್ನು ಹಿಗ್ಗಾಮುಗ್ಗಾ ತರಾಟೆ ತೆಗೆದುಕೊಂಡಿದ್ದರು. ಇದರಿಂದ ಕೋಪಗೊಂಡ ಪುನೀತ್ ಈ ವಿಚಾರವನ್ನು ಸ್ನೇಹಿತ ಯಶವಂತ್ಗೆ ತಿಳಿಸಿದ್ದಾನೆ. ಬಳಿಕ ಇಬ್ಬರೂ ಸಂಚು ರೂಪಿಸಿ ಸ್ನೇಹಿತ ಪ್ರಕಾಶ್ ಮೇಲೆ ಗಂಭೀರವಾಗಿ ಹಲ್ಲೆ ಮಾಡಿದ್ದಾರೆ.
ಗಂಭೀರವಾಗಿ ಗಾಯಗೊಂಡಿದ್ದ ಪ್ರಕಾಶ್ನನ್ನು ಹೆಚ್ಚಿನ ಚಿಕಿತ್ಸೆಗಾಗಿ ಇಲ್ಲಿನ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಜೊತೆಗೆ ಈ ಸಂಬಂಧ ಪ್ರಕಾಶ್ ಪೋಷಕರು ಪೊಲೀಸ್ ಠಾಣೆಗೂ ದೂರು ನೀಡಿದ್ದರು. ಆದರೆ ಚಿಕಿತ್ಸೆಗೆ ಸ್ಪಂದಿಸದೇ ಪ್ರಕಾಶ್ ಸಾವನ್ನಪ್ಪಿದ್ದ. ಬಳಿಕ ಹಾಸನ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದರು. ಹಾಸನ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಇದನ್ನೂ ಓದಿ : Depo controller suicide: ರಾಯಬಾಗ ಬಸ್ ನಿಲ್ದಾಣದ ಕಟ್ಟಡದಲ್ಲೇ ಡಿಪೋ ಕಂಟ್ರೋಲರ್ ಆತ್ಮಹತ್ಯೆ