ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಉದ್ದೇಶ ಪೂರ್ವಕವಾಗಿ ರಾಜೀವ್ ಗಾಂಧಿ ಹೆಸರಿನಲ್ಲಿ ನೀಡುವ ಖೇಲ್ ರತ್ನ ಪ್ರಶಸ್ತಿ ಹೆಸರನ್ನು ಬದಲಾಯಿಸಿದ್ದಾರೆ ಹಾಗೂ ಇಡಿ ಮೂಲಕ ಕಾಂಗ್ರೆಸ್ ಪಕ್ಷದ ನಾಯಕರ ವಿರುದ್ಧ ಉದ್ದೇಶ ಪೂರ್ವಕವಾಗಿ ದಾಳಿ ನಡೆಸುತ್ತಿದ್ದಾರೆ ಎಂದು ಆರೋಪಿಸಿ ಯುವ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಯ ಕಾಂಗ್ರೆಸ್ ಭವನದಲ್ಲಿ ಪ್ರತಿಭಟನೆ ನಡೆಸಿ, ಪ್ರಧಾನಿ ನರೇಂದ್ರ ಮೋದಿ ಅವರು ಇಬ್ಬಗೆ ನೀತಿಯನ್ನು ಅನುಸರಿಸುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಖೇಲ್ ರತ್ನ ಪ್ರಶಸ್ತಿಗೆ ಕ್ರೀಡಾ ಕ್ಷೇತ್ರದ ದಂತಕತೆ ಧ್ಯಾನ್ ಚಂದ್ ಹೆಸರನ್ನು ಮರುನಾಮಕರಣ ಮಾಡಿದ್ದಾರೆ. ಅದನ್ನು ಸ್ವಾಗತಿಸುತ್ತೇವೆ, ಆದರೆ ರಾಜೀವ್ ಗಾಂಧಿ ಹಾಗೂ ಧ್ಯಾನ್ ಚಂದ್ ದೇಶಕ್ಕೆ ಅಪಾರವಾದ ಕೊಡುಗೆ ನೀಡಿದ್ದಾರೆ. ರಾಜೀವ್ ಗಾಂಧಿ ಹೆಸರನ್ನು ಬದಲಾಯಿಸುವ ಬದಲು ಧ್ಯಾನ್ ಚಂದ್ ಅವರ ಹೆಸರಿನಲ್ಲೇ ಹೊಸ ಪ್ರಶಸ್ತಿ ಆರಂಭಿಸಿ, ಅವರ ಹೆಸರನ್ನು ನಾಮಕರಣ ಮಾಡಬಹುದಾಗಿತ್ತು. ಆದರೆ, ರಾಜೀವ್ ಗಾಂಧಿ ಬಲಿದಾನವನ್ನು ನೆನೆಯದ ನರೆಂದ್ರ ಮೋದಿ, ಉದ್ದೇಶಪೂರ್ವಕವಾಗಿ ಅವರ ಹೆಸರು ಬದಲಾಯಿಸಿರುವುದು ಸೇಡಿನ ರಾಜಕೀಯದ ಮನೋಭಾವ ಎತ್ತಿ ತೋರುತ್ತದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಯುವ ಕಾಂಗ್ರೆಸ್ ನಾಯಕ ಮನೋಹರ್ ಮಾತನಾಡಿ, ನರೇಂದ್ರ ಮೋದಿ ದೇಶದ ಅಭಿವೃದ್ಧಿ ಮರೆತು ಬೆಲೆಯೇರಿಕೆಗೆ ಕಡಿವಾಣ ಹಾಕದೇ, ಕೇವಲ ಪ್ರಚಾರದಲ್ಲಿ ತೊಡಗಿ ಸೇಡಿನ ರಾಜಕೀಯ ಮಾಡುವುದರಲ್ಲಿ ನಿಸ್ಸೀಮರಾಗಿದ್ದಾರೆ. ದಾಖಲೆ ಮಟ್ಟದ ಬೆಲೆ ಏರಿಕೆ, ಉದ್ಯೋಗ ಸೃಷ್ಟಿಸುವಲ್ಲಿ ವಿಫಲ ಹಾಗೂ ಕೇವಲ ಪ್ರಚಾರದಲ್ಲೇ ದೇಶದ ತೆರಿಗೆ ಹಣ ವ್ಯಯ ಮಾಡಿ ವಿದೇಶ ಸುತ್ತಿ ದೇಶದ ಜನರ ಮೇಲೆ ತೆರಿಗೆ ಹೊರೆಯನ್ನು ಏರಿಕೆ ಮಾಡಿರುವುದು ನರೇಂದ್ರ ಮೋದಿಯ 7 ವರ್ಷದ ಸಾಧನೆಯಾಗಿದೆ. ಆದರೆ, ದೇಶದ ಅಭಿವೃದ್ಧಿ ಬಗ್ಗೆ ಕಾಳಜಿ ಇಲ್ಲದ ನರೇಂದ್ರ ಮೋದಿ ಇಂತಹ ಕೀಳುಮಟ್ಟದ ರಾಜಕೀಯ ಜೀವನ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.
ರಾಜ್ಯದಲ್ಲಿ ಬಿಜೆಪಿ ನಾಯಕರು ಬಿಜೆಪಿ ಶಾಸಕರು ಹಾಗೂ ಮಂತ್ರಿಗಳ ಮನೆಯ ಮೇಲೆ ಇಡಿ ದಾಳಿ ನಡೆಸದೇ, ಉದ್ದೇಶಪೂರ್ವಕವಾಗಿ ಕಾಂಗ್ರೆಸ್ ಪಕ್ಷದ ನಾಯಕರು ಹಾಗೂ ಶಾಸಕರ ಮೇಲೆ ದಾಳಿ ನಡೆಸಲು ಕಾರಣ ಏನೆಂಬುದನ್ನು ಜನತೆಗೆ ತಿಳಿಸಬೇಕು. ಬಿಜೆಪಿ ಭ್ರಷ್ಟಾಚಾರದಲ್ಲಿ ಮುಳುಗಿದೆ, ಬಿಜೆಪಿಯವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಇಲ್ಲದೇ ಹೋದರೆ ಭ್ರಷ್ಟಾಚಾರದಲ್ಲಿ ತಾನು ಶಾಮೀಲಾಗಿದ್ದಾನೆ ಎಂಬುದನ್ನು ಜನರ ಮುಂದೆ ಒಪ್ಪಿಕೊಳ್ಳಬೇಕು ಎಂದಿದ್ದಾರೆ.
ರಾಜೀನಾಮೆ ನೀಡಿ ತೊಲಗಲಿ:
ಮೋದಿಯ ದುರಾಡಳಿತವನ್ನು ದೇಶದ ಪ್ರತಿಯೊಬ್ಬ ನಾಗರಿಕರು ಖಂಡಿಸುತ್ತಿದ್ದಾರೆ. ಮೋದಿ ರಾಜಿನಾಮೆ ನೀಡಬೇಕೆಂದು ಪ್ರತಿಯೊಬ್ಬರು ಆಗ್ರಹಪಡಿಸುತ್ತಿದ್ದಾರೆ. ಹಾಗಾದರೆ ನರೇಂದ್ರ ಮೋದಿ ದೇಶದ ಜನರ ಮಾತಿಗೆ ಬೆಲೆ ಕೊಟ್ಟು ರಾಜೀನಾಮೆ ನೀಡಿ ತೊಲಗಬೇಕು ಎಂದು ಆಗ್ರಹಿಸಿದರು.
ಬೆಂಗಳೂರು ನಗರ ಕಾಂಗ್ರೆಸ್ ಪ್ರಚಾರ ಸಮಿತಿಯಿಂದ ನಡೆದ ಈ ಪ್ರತಿಭಟನೆಯಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರಾದ ಜಿ.ಜನಾರ್ದನ್ ಎ.ಆನಂದ್, ಎಂ.ಎ.ಸಲೀಂ, ಮತ್ತಿತರರು ಭಾಗವಹಿಸಿದ್ದರು.