ಬೆಂಗಳೂರು: ಮದುವೆಯಾಗಿ ಮೂರು ಮಕ್ಕಳನ್ನು ಹೊಂದಿದ್ದಾತ, ತನ್ನ ಪರಿಚಯಸ್ಥರ ಮನೆಯ ಹೆಣ್ಣು ಮಗಳನ್ನು ಪ್ರೀತಿಸಿ ಆಕೆಯ ಜೊತೆ ಓಡಿ ಹೋದ ಪರಿಣಾಮ ಯುವತಿಯ ತಂದೆ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಂದಿನಿ ಲೇಔಟ್ನ ಸಂಜಯ್ ಗಾಂಧಿ ನಗರದಲ್ಲಿ ನಡೆದಿದೆ.
ಒಳ್ಳೆಯವನು, ಗುಡ್ ನೇಚರ್ ಎಂದು ಮನೆ ಒಳಗೆ ಸೇರಿಸಿಕೊಂಡಿದ್ದೆ ತಪ್ಪಾಯ್ತು. ನಂಬಿಕೆ ಇಟ್ಟಿದ್ದಕ್ಕೆ ಮನೆ ಮಗಳನ್ನೇ ಪಟಾಯಿಸಿ ಪರಾರಿಯಾಗಿದ್ದಾನೆ. ಇದರಿಂದಾಗಿ ನನ್ನ ಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೃತನ ಪತ್ನಿ ಆರೋಪ ಮಾಡಿದ್ದಾರೆ.
ಏನಿದು ಘಟನೆ..?
ಆ ದಂಪತಿಗೆ ಮೂರು ಹೆಣ್ಣುಮಕ್ಕಳಿದ್ದು, ಕೂಲಿಯನ್ನೇ ನಂಬಿ ಜೀವನ ಸಾಗಿಸುತ್ತಿದ್ದರು. ಪರಿಚಿತನಾಗಿದ್ದ ಆರೋಪಿ ಉದಯ್, ಆಗಾಗ ಮನೆಗೆ ಬಂದು ಹೋಗುತ್ತಿದ್ದ ಎನ್ನಲಾಗಿದೆ. ಇದೇ ವೇಳೆ ಆತನಿಗೆ ದಂಪತಿಯ ಮಗಳೊಬ್ಬಳ ಜೊತೆಗೆ ಸ್ನೇಹ ಬೆಳೆದಿದೆ. ಇದು ನಂತರ ಪ್ರೀತಿಗೆ ತಿರುಗಿದೆ. ಕೊನೆಗೊಂದು ದಿನ ಉದಯ್ ಹಾಗೂ ಆಕೆ ಮನೆ ಬಿಟ್ಟು ಓಡಿ ಹೋಗಿದ್ದಾರೆ.
ಆರೋಪಿ ಉದಯ್ನ ಪತ್ನಿ, ಆ ದಂಪತಿಗೆ ತಿಳಿಸಿದಾಗಲೇ ಈ ವಿಚಾರ ಅವರ ಮನೆಯವರಿಗೆ ಗೊತ್ತಾಗಿದೆ. ಈ ವಿಷಯದಿಂದ ಮನನೊಂದ ಯುವತಿ ತಂದೆ ಎರಡು ದಿನದ ಬಳಿಕ ಮನೆಯ ಬಾತ್ ರೂಂ ಕಿಟಕಿಗೆ ಹಗ್ಗ ಕಟ್ಟಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಯುವತಿ ತಾಯಿ ತನ್ನ ಗಂಡನ ಸಾವಿಗೆ ಮಗಳು ಹಾಗೂ ಉದಯ್ ಕಾರಣವಾಗಿದ್ದು, ಈ ಕುರಿತು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ನಂದಿನಿ ಲೇಔಟ್ ಪೊಲೀಸರಿಗೆ ದೂರು ನೀಡಿದ್ದಾರೆ.