ಬೆಂಗಳೂರು: ಪ್ರೀತಿಸಲು ನಿರಾಕರಿಸಿದ ಯುವತಿಗೆ ಪಾಗಲ್ ಪ್ರೇಮಿಯೊಬ್ಬ ಚಾಕುವಿನಿಂದ ಇರಿದು ಹಲ್ಲೆ ನಡೆಸಿರುವ ಘಟನೆ ಬಾಗಲಗುಂಟೆ ಪೊಲೀಸ್ ಠಾಣೆ ವ್ಯಾಪ್ತಿಯ ಮಂಜುನಾಥ್ ನಗರದಲ್ಲಿ ನಡೆದಿದೆ. ಪಾಗಲ್ ಪ್ರೇಮಿ ಉದಯ್ ಎಂಬಾತ, ಬುಧವಾರ ಯುವತಿ ಕಾಲೇಜಿಗೆ ಹೋಗುವಾಗ ಅಡ್ಡಗಟ್ಟಿ ಕೃತ್ಯವೆಸಗಿದ್ದಾನೆ.
ಉದಯ್ ಚಾಕುವಿನಿಂದ ಯುವತಿಯ ಕುತ್ತಿಗೆ ಹಾಗೂ ತೊಡೆ ಭಾಗಕ್ಕೆ ಬಲವಾಗಿ ಇರಿದು ಕೊಲೆಗೆ ಯತ್ನಿಸಿ, ನಂತರ ತಾನೂ ಗೋಡೆಗೆ ತಲೆ ಚಚ್ಚಿಕೊಂಡು ಆತ್ಮಹತ್ಯೆಗೆ ಪ್ರಯತ್ನಿಸಿದ್ದಾನೆ. ಉದಯ್ ಮತ್ತು ಯುವತಿ ರಾಜಾಜಿನಗರದ ಕಾಲೇಜಿನಲ್ಲಿ ಒಟ್ಟಿಗೆ ಪಿಯುಸಿ ಮುಗಿಸಿದ್ದರು. ಬಳಿಕ ಪ್ರತ್ಯೇಕ ಖಾಸಗಿ ಕಾಲೇಜಿನಲ್ಲಿ ಪದವಿ ವ್ಯಾಸಂಗ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.
ಕಳೆದ ಮೂರು ವರ್ಷದಿಂದ ಯುವತಿ ಜೊತೆ ಗೆಳೆತನ ಹೊಂದಿದ್ದ ಉದಯ್, ಇತ್ತೀಚೆಗೆ ಲವ್ ಪ್ರಪೋಸ್ ಮಾಡಿದ್ದ ಎನ್ನಲಾಗಿದೆ. ಆದರೆ, ಯುವತಿ ಆತನ ಪ್ರೀತಿಯನ್ನು ನಿರಾಕರಿಸಿದ್ದಳು. ಇದರಿಂದ ಕುಪಿತಗೊಂಡಿದ್ದ ಉದಯ್, ಕಾಲೇಜಿಗೆ ಹೋಗುತ್ತಿದ್ದ ಯುವತಿಯನ್ನು ಅಡ್ಡಗಟ್ಟಿ ಮಾರಣಾಂತಿಕ ಹಲ್ಲೆ ನಡೆಸಿ, ಆತ್ಮಹತ್ಯೆಗೆ ಯತ್ನಿಸುತ್ತಿದ್ದ ವೇಳೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಗಾಯಗೊಂಡ ಯುವತಿಯನ್ನು ಆಸ್ಪತ್ರೆಗೆ ಸೇರಿಸಲಾಗಿದ್ದು, ಗಂಭೀರ ಸ್ಥಿತಿಯಲ್ಲಿದ್ದಾಳೆ. ಈ ಸಂಬಂಧ ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಮೈಸೂರು: ಸ್ನೇಹಿತನ ಜೊತೆ ಚಾಮುಂಡಿ ಬೆಟ್ಟಕ್ಕೆ ತೆರಳಿದ್ದ ವಿದ್ಯಾರ್ಥಿನಿ ಮೇಲೆ Gangrape