ಬೆಂಗಳೂರು: ಜಾಹೀರಾತು ನೋಡಿ ಕಂಪನಿಯೊಂದಕ್ಕೆ ಕರೆ ಮಾಡಿ ವೇಶ್ಯೆಯನ್ನ ಮನೆಗೆ ಕರೆಸಿಕೊಂಡ ಯುವಕನೋರ್ವ 97 ಸಾವಿರ ರೂಪಾಯಿ ಕಳೆದುಕೊಂಡಿದ್ದಾನೆ.
ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುವ ವೈಟ್ ಫೀಲ್ಡ್ ನಿವಾಸಿ ಸತೀಶ್ (ಹೆಸರು ಬದಲಾಯಿಸಲಾಗಿದೆ) ಹಣ ಕಳೆದುಕೊಂಡವ. ಇದೇ ತಿಂಗಳು 14ರಂದು ಕೊಕಂಟೊ ಆ್ಯಪ್ನಲ್ಲಿ ಜಾಹೀರಾತು ನೋಡಿ, ಮನೆಗೆ ಕಾಲ್ ಗರ್ಲ್ ಕರೆಸಿಕೊಂಡಿದ್ದ. ಇದರಂತೆ ವೇಶ್ಯೆ ಮನೆಗೆ ಬಂದಿದ್ದು, ಬಳಿಕ ಮುಂಗಡವಾಗಿ 10 ಸಾವಿರ ರೂ. ಹಣ ಆನ್ಲೈನ್ನಲ್ಲಿ ಹಾಕಿಸಿಕೊಂಡಿದ್ದಾಳೆ. ನಂತರ ತಾನು ಎನ್ಜಿಓ ಅಧಿಕಾರಿ ಎಂದು ಹೇಳಿ, ಕೇಳಿದಷ್ಟು ಹಣ ಕೊಡದಿದ್ದರೆ ತನ್ನ ಮೇಲೆ ಅತ್ಯಾಚಾರ ಮಾಡಿರುವುದಾಗಿ ಪೊಲೀಸರಿಗೆ ದೂರು ನೀಡುವುದಾಗಿ ಬ್ಲಾಕ್ಮೇಲ್ ಮಾಡಿದ್ದಾಳೆ.
ಇದರಿಂದ ಆತಂಕಕ್ಕೆ ಒಳಗಾದ ಸತೀಶ್, ಈಕೆಯ ಮ್ಯಾನೇಜರ್ಗೆ ಕರೆ ಮಾಡಿದ್ದಾನೆ. ಮನೆಯಲ್ಲಿ ಒಪ್ಪಂದ ಮಾಡಿಕೊಂಡರೆ 2 ಲಕ್ಷ, ಪೊಲೀಸ್ ಠಾಣೆಗೆ ಹೋದರೆ 5 ಲಕ್ಷ ರೂ. ಆಗಲಿದೆ ಎಂದು ಮ್ಯಾನೇಜರ್ ಹೇಳಿದ್ದಾನೆ. ಇದರಿಂದ ದಂಗಾದ ಯುವಕ ಕಾಲ್ ಗರ್ಲ್ ಹೇಳಿದಂತೆ ಮೊಬೈಲ್ನಿಂದ ಹಂತ ಹಂತವಾಗಿ 50, 20 ಹಾಗೂ 17 ಸಾವಿರ ರೂ.ಗಳನ್ನು ಮ್ಯಾನೇಜರ್ ಅಕೌಂಟ್ಗೆ ವರ್ಗಾಯಿಸಿದ್ದಾನೆ. ಬಳಿಕ ವೇಶ್ಯೆ ಅಲ್ಲಿಂದ ಕಾಲ್ಕಿತ್ತಿದ್ದಾಳೆ. ಒಟ್ಟಾರೆ 97 ಸಾವಿರ ರೂ. ಕಳೆದುಕೊಂಡ ಸತೀಶ್ ವೈಟ್ ಫೀಲ್ಡ್ ಠಾಣೆಗೆ ದೂರು ನೀಡಿದ್ದಾನೆ.