ಬೆಂಗಳೂರು: ಕ್ರೇನ್‌ಗೆ ವಿದ್ಯುತ್ ಪ್ರವಹಿಸಿ ಯುವಕ ಸಾವನ್ನಪ್ಪಿದ ಘಟನೆ ಇಂದು ಮಧ್ಯಾಹ್ನ ಲಗ್ಗೆರೆಯ ಪಾರ್ವತಿಪುರದಲ್ಲಿ ನಡೆದಿದೆ. ಹಿಮಾಚಲ ಪ್ರದೇಶದ ಜಿತಿನ್ ಕುಮಾರ್ (19) ಮೃತಪಟ್ಟ ಯುವಕ. ಮೊಬೈಲ್ ಟವರ್ಗೆ ಬ್ಯಾಟರಿ ಜೋಡಿಸಲು ತರಿಸಲಾಗಿದ್ದ ಕ್ರೇನ್ ಆಪರೇಟ್ ಮಾಡುವಾಗ ವಿದ್ಯುತ್ ತಂತಿ ಸ್ಪರ್ಶಿಸಿದೆ.
ಡಿಸೆಂಬರ್ 8ರಂದು ಹಳೆ ಕಟ್ಟಡ ಕೆಡವುವ ಸಂದರ್ಭದಲ್ಲಿ ಮೊಬೈಲ್ ಟವರ್ ನೆಲಕ್ಕುರುಳಿತ್ತು. ಟವರ್ ಕಂಬದ ದುರಸ್ತಿ ಕಾರ್ಯಕ್ಕೆ ಕ್ರೇನ್ ತರಿಸಲಾಗಿತ್ತು. ಸಹೋದರ ಕ್ರೇನ್ ಆಪರೇಟ್ ಮಾಡುತ್ತಿದ್ದರೆ ಜಿತಿನ್ ಮಾರ್ಗದರ್ಶನ ನೀಡುತ್ತಿದ್ದ. ಈ ಸಂದರ್ಭದಲ್ಲಿ ರಸ್ತೆ ಬದಿಯಲ್ಲಿದ್ದ ವಿದ್ಯುತ್ ತಂತಿ ಕ್ರೇನ್‌ಗೆ ತಗುಲಿದೆ. ಕ್ರೇನ್ ಮೇಲೆ ಕೈಯಿಟ್ಟು ನಿಂತಿದ್ದ ಜಿತಿನ್ಗೆ ವಿದ್ಯುತ್ ಪ್ರವಹಿಸಿದೆ. ತೀವ್ರವಾಗಿ ಅಸ್ವಸ್ಥನಾಗಿದ್ದ ಜಿತಿನ್‌ನನ್ನು ಆಸ್ಪತ್ರೆಗೆ ಸಾಗಿಸಲು ಪ್ರಯತ್ನಿಸಲಾಯಿತು. ಆದರೆ ಅಷ್ಟರಲ್ಲಿ ಸಾವನ್ನಪ್ಪಿದ್ದಾನೆ. ಸ್ಥಳಕ್ಕೆ ನಂದಿನಿ ಲೇಔಟ್ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಇತ್ತೀಚಿನ ಘಟನೆಗಳು- ಕರೆಂಟ್ ತಂತಿ ತುಳಿದು ತಾಯಿ, ಮಗಳು ಸಾವು: ರಸ್ತೆ ಬದಿ ತುಂಡಾಗಿ ಬಿದ್ದಿದ್ದ ಕರೆಂಟ್ ತಂತಿ ತುಳಿದು ತಾಯಿ ಮತ್ತು ಮಗಳು ಸಾವನ್ನಪ್ಪಿದ ಘಟನೆ ಬೆಂಗಳೂರಿನ ವೈಟ್ ಫೀಲ್ಡ್ನ ಕಾಡುಗೋಡಿಯಲ್ಲಿ (ನವೆಂಬರ್ 20-2023) ಬೆಳಿಗ್ಗಿನ ಜಾವ ನಡೆದಿತ್ತು. ತಾಯಿ ಸೌಂದರ್ಯ (23) ಹಾಗೂ 9 ತಿಂಗಳ ಹೆಣ್ಣುಮಗು ಮೃತಪಟ್ಟಿದ್ದರು.
ಇದನ್ನೂ ಓದಿ: ಬೆಂಗಳೂರು: ತುಂಡಾಗಿ ಬಿದ್ದ ಕರೆಂಟ್ ತಂತಿ ತುಳಿದು ತಾಯಿ, ಮಗಳು ಸಾವು; ರಕ್ಷಿಸಲಾಗದೇ ಗೋಳಾಡಿದ ಪತಿ