ಬೆಂಗಳೂರು : 27ರಂದು ಆಂಧ್ರ ಪ್ರದೇಶದ ಕುಪ್ಪಂ ಬಳಿ ಕುಸಿದು ಬಿದ್ದ ಯುವನಟ ನಂದಮೂರಿ ತಾರಕರತ್ನ ಗಣನೀಯವಾಗಿ ಚೇತರಿಕೆ ಕಂಡಿಲ್ಲ. ಇನ್ನೂ ತೀವ್ರ ನಿಗಾ ಘಟಕದಲ್ಲಿ ವೈದ್ಯಕೀಯ ವೀಕ್ಷಣೆಯಲ್ಲಿದ್ದಾರೆ ಎಂದು ನಾರಾಯಣ ಹೆಲ್ತ್ ಸಿಟಿಯ ವೈದ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬೆಂಗಳೂರು-ಹೊಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಎನ್ಹೆಚ್ ಆಸ್ಪತ್ರೆಯ ನಾಲ್ಕನೇ ಮಹಡಿಯಲ್ಲಿ ಚಿಕಿತ್ಸೆಗಾಗಿ ದಾಖಲಾಗಿರುವ ತಾರಕರತ್ನ ಅವರಿಗೆ ಮಾಧ್ಯಮಗಳ ವರದಿಯಂತೆ ECMO ಚಿಕಿತ್ಸೆ ನೀಡಿಲ್ಲ ಎಂದು ಆರೋಗ್ಯ ಬುಲೆಟಿನ್ ಮೂಲಕ ಸ್ಪಷ್ಟಪಡಿಸಿದೆ. ಅಲ್ಲದೆ ಎನ್ಹೆಚ್ ಆಸ್ಪತ್ರೆಯಲ್ಲಿ ದಾಖಲಾದಾಗಿನಿಂದ ಈವರೆಗೆ ಹೊಸ ಬೆಳವಣಿಗೆ ಕಾಣದೆ ಗಂಭೀರ ಸ್ಥಿತಿ ಮುಂದುವರೆದಿದೆ. ಅವರ ಕುಟುಂಬಕ್ಕೆ ಆಸ್ಪತ್ರೆಯಿಂದ ನೇರವಾಗಿ ಆರೋಗ್ಯ ಸ್ಥಿತಿ ಕುರಿತು ಆಸ್ಪತ್ರೆ ಮಾಹಿತಿ ನೀಡುತ್ತಿದೆ.
ಆದರೆ, ಮಾಧ್ಯಮಗಳಲ್ಲಿ ಬಂದ ಹಾಗೆ ECMO ಸಹಕಾರ ನೀಡಲಾಗಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದು, ಸಾರ್ವಜನಿಕರು ಸಹಕರಿಸಬೇಕೆಂದು ಕೋರಿದ್ದಾರೆ. ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ. ಹೃದಯಾಘಾತದಿಂದ ಮೆದುಳಿಗೆ ಶಾಕ್ ಆಗಿದ್ದು, ಕ್ಷಣ ಕ್ಷಣದ ತಪಾಸಣೆ ಅತ್ಯಗತ್ಯವಾಗಿದೆ. ಇನ್ನೂ ಕಾಲಾವಕಾಶ ತೆಗೆದುಕೊಳ್ಳಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಇದ್ದಕ್ಕಿದ್ದಂತೆ ಕುಸಿದ ಬಿದ್ದಿದ್ದ ನಟ ತಾರಕರತ್ನ: ಆಂಧ್ರಪ್ರದೇಶದ ತೆಲುಗು ದೇಶಂ ಪಾರ್ಟಿಯ ಯುವಘಳಂ ಪ್ರಚಾರದ ಚಟುವಟಿಕೆಗಳಲ್ಲಿ ತಾರಕರತ್ನ ತೊಡಗಿಸಿಕೊಂಡಿದ್ದರು. ಶುಕ್ರವಾರ ಮಧ್ಯಾಹ್ನ ಕುಪ್ಪಂನ ಪ್ರಮುಖ ಬೀದಿಗಳಲ್ಲಿ ಸಾಗಿದ ಯುವಘಳಂ ಪಾದಯಾತ್ರೆಯಲ್ಲಿ ನಾರಾ ಲೋಕೇಶ್ರೊಂದಿಗೆ ಹೆಜ್ಜೆ ಹಾಕಿದ್ದ ಸಂದರ್ಭದಲ್ಲಿ ನಟ ತಾರಕರತ್ನ ಅವರು ಇದ್ದಕ್ಕಿದ್ದಂತೆ ಕುಸಿದು ಬಿದ್ದಿದ್ದರು. ಟಿಡಿಪಿ ಪಕ್ಷದ ಕಾರ್ಯಕರ್ತರು ಕೂಡಲೇ ಅವರನ್ನು ಕುಪ್ಪಂ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ತೀವ್ರ ನಿಘಾ ಘಟಕದಲ್ಲಿ ಚಿಕಿತ್ಸೆ ನಡೆಯುತ್ತಿತ್ತು. ಹೆಚ್ಚಿನ ಚಿಕಿತ್ಸೆಗೆ ಕೃಷ್ಣಗಿರಿ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಮಾರ್ಗವಾಗಿ ಕರೆತಂದು ಬೊಮ್ಮಸಂದ್ರದ ನಾರಾಯಣ ಹೆಲ್ತ್ ಸಿಟಿಗೆ ದಾಖಲಿಸಲಾಗಿತ್ತು.
ಆಸ್ಪತ್ರೆ ಸುತ್ತ-ಮುತ್ತ ಬಿಗಿ ಭದ್ರತೆ: ಕುಪ್ಪಂ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸುತ್ತಿದ್ದ ನಟ ತಾರಕರತ್ನ ಆರೋಗ್ಯ ಸ್ಥಿತಿ ಸ್ಥಿರವಾಗಿತ್ತು. ಆದರೆ ಮುಂಜಾಗ್ರತೆಗಾಗಿ ಹೆಚ್ಚಿನ ತಪಾಸಣೆ ಮತ್ತು ಚಿಕಿತ್ಸೆಗಾಗಿ ನಾರಾಯಣ ಹೆಲ್ತ್ ಸಿಟಿಗೆ ಅಲ್ಲಿನ ವೈದ್ಯರು ಸಲಹೆ ನೀಡಿದ್ದರು. ಹೀಗಾಗಿ ಅವರನ್ನು ಎನ್ಹೆಚ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಷ್ಟೇ ಅಲ್ಲ, ಮಾರ್ಗದಲ್ಲಿ ಟ್ರಾಫಿಕ್ ಸಮಸ್ಯೆಯಾಗದಂತೆ ಹಾಗೂ ಎನ್ಟಿಆರ್ ಕುಟುಂಬದ ಅಭಿಮಾನಿಗಳ ನೂಕು ನುಗ್ಗಲು ತಡೆಯಲು ಅತ್ತಿಬೆಲೆ, ಸೂರ್ಯಸಿಟಿ, ಹೆಬ್ಬಗೋಡಿಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿತ್ತು.
ಆರೋಗ್ಯ ವಿಚಾರಿಸಿದ್ದ ಸಚಿವ ಸುಧಾಕರ್: ನಟ ಜ್ಯೂ. ಎನ್ಟಿಆರ್, ಕಲ್ಯಾಣ್ ರಾಮ್, ಶಿವ ರಾಜ್ಕುಮಾರ್, ಸಚಿವ ಸುಧಾಕರ್, ನಂದಮೂರಿ ಬಾಲಕೃಷ್ಣ ಅವರು ಭಾನುವಾರದಂದು ಬೆಂಗಳೂರಿನ ನಾರಾಯಣ ಹೆಲ್ತ್ ಸಿಟಿ ಆಸ್ಪತ್ರೆಗೆ ಭೇಟಿ ನೀಡಿ ನಂದಮೂರಿ ತಾರಕರತ್ನ ಅವರ ಆರೋಗ್ಯ ವಿಚಾರಿಸಿದ್ದರು.
ಇದನ್ನೂ ಓದಿ : ನಟ ತಾರಕರತ್ನಗೆ ಬೆಂಗಳೂರಿನಲ್ಲಿ ಚಿಕಿತ್ಸೆ: ಆಸ್ಪತ್ರೆಗೆ ಜ್ಯೂ.ಎನ್ಟಿಆರ್, ಕುಟುಂಬಸ್ಥರ ಭೇಟಿ
ವೈದ್ಯರ ಭೇಟಿ ಬಳಿಕ ರಾಜ್ಯ ವೈದ್ಯಕೀಯ ಸಚಿವ ಡಾ. ಕೆ ಸುಧಾಕರ್ ಮಾಹಿತಿ ನೀಡಿ, ತೀವ್ರ ಹೃದಯಾಘಾತದಿಂದ ಅಸ್ವಸ್ಥರಾದ ತಾರಕರತ್ನ ಅವರಿಗೆ ಮುಖ್ಯಮಂತ್ರಿಗಳ ನಿರ್ದೇಶನದ ಮೇರೆಗೆ ಗ್ರೀನ್ ಕಾರಿಡಾರ್ ಮೂಲಕ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿತ್ತು. ನಾರಾಯಣ ಹೃದಯಾಲದಲ್ಲಿ ನ್ಯೂರಾಲಜಿ, ಕಾರ್ಡಿಯಾಲಜಿ ಸೇರಿದಂತೆ ನುರಿತ ವೈದ್ಯರ ತಂಡದಿಂದ ಚಿಕಿತ್ಸೆ ನೀಡಲಾಗುತ್ತಿದೆ. ನಿಮಾನ್ಸ್ ಆಸ್ಪತ್ರೆ ಮೆದುಳಿನ ತಜ್ಞ ವೈದ್ಯರ ತಂಡದಿಂದಲೂ ಸಹ ಚಿಕಿತ್ಸೆ ಬಗ್ಗೆ ಮಾರ್ಗದರ್ಶನ ಪಡೆಯಲಾಗುತ್ತಿದೆ. ಸದ್ಯ ಅವರ ಆರೋಗ್ಯ ಸ್ಥಿರವಾಗಿದೆ. ಆದರೆ ಅಪಾಯದಿಂದ ಸಂಪೂರ್ಣ ಹೊರ ಬಂದಿಲ್ಲ. ಆದರೂ ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ. ತಾರಕರತ್ನ ಅವರು ಆದಷ್ಟು ಶೀಘ್ರ ಗುಣರಾಗಲಿ ಎಂದು ಆಶಿಸೋಣ ಎಂದು ತಿಳಿಸಿದ್ದರು.
ಇದನ್ನೂ ಓದಿ: ಆಸ್ಪತ್ರೆಯಲ್ಲಿ ನಟ ತಾರಕರತ್ನ ಆತ್ಮಬಲದಿಂದ ಹೋರಾಡಬೇಕಿದೆ - ಜೂ. ಎನ್ಟಿಆರ್