ಬೆಂಗಳೂರು: ಅತೃಪ್ತ ಶಾಸಕರು ನಾಳೆ ಸ್ಪೀಕರ್ ಎದುರು ಹಾಜರಾಗದೇ ಇದ್ದಲ್ಲಿ ಸ್ಪೀಕರ್ ಕಾನೂನು ರೀತಿ ಕ್ರಮ ಕೈಗೊಳ್ಳಲಿದ್ದಾರೆ, ಶಾಸಕತ್ವದಿಂದ ಅನರ್ಹರಾಗುತ್ತೀರಿ ಎನ್ನುವುದನ್ನು ಅರಿಯಿರಿ ಎಂದು ಸಚಿವ ಡಿ.ಕೆ. ಶಿವಕುಮಾರ್ ಅತೃಪ್ತ ಶಾಸಕರಿಗೆ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ಪೀಕರ್ ಬೆಳಗ್ಗೆ ನಮ್ಮ ನಿಲುವಳಿ ಸೂಚನೆ ಮೇರೆಗೆ ವಿಪ್ ನೀಡಲು ಯಾವ ತಡೆ ಇಲ್ಲ, ಶಾಸಕಾಂಗ ಪಕ್ಷದ ನಾಯಕರು ನಿಮ್ಮ ನಿಮ್ಮ ಸದಸ್ಯರಿಗೆ ವಿಪ್ ನೀಡಬಹುದು ಎಂದು ಸ್ಪಷ್ಟೀಕರಣ ನೀಡಿದ್ದಾರೆ ಇದು ರೂಲಿಂಗ್ ಕೂಡ ಆಗಿದೆ. ರೂಲಿಂಗ್ ಹಿನ್ನಲೆಯಲ್ಲಿ ಅನರ್ಹತೆ ಕುರಿತು ತೀರ್ಮಾನ ಮಾಡಲು ಶಾಸಕಾಂಗ ನಾಯಕರು ಮನವಿ ಮಾಡಿದ್ದಾರೆ, ಹಾಗೂ ಸುಪ್ರೀಂಕೋರ್ಟ್ನಲ್ಲಿ ಅತೃಪ್ತರ ಅರ್ಜಿ ತೀರ್ಮಾನ ಆಗುವ ಮುನ್ನ ಇಲ್ಲಿ ತೀರ್ಮಾನ ಆಗಬೇಕು ಎನ್ನುವುದು ನಮ್ಮ ಮನವಿ ಎಂದರು.
ನಾಳೆ ಬೆಳಗ್ಗೆ 11ರ ಒಳಗೆ ಹಾಜರಾಗಲು ಸ್ಪೀಕರ್ ಅತೃಪ್ತ ಶಾಸಕರಿಗೆ ನೋಟಿಸ್ ಜಾರಿಗೊಳಿಸಿದ್ದಾರೆ, ಮಂತ್ರಿಯಾಗಲು ಆಸೆ ಪಟ್ಟಿದ್ದೀರಿ ಆ ಮೂಲಕ ಬಿಜೆಪಿಯವರಿಗೆ ಅನುಕೂಲ ಮಾಡಿ ಕೊಡುತ್ತಿದ್ದೀರಿ, ನಾಳೆ ಸ್ಪೀಕರ್ ತೀರ್ಮಾನ ಮಾಡಲು ಅವಕಾಶ ಇದೆ ಅನರ್ಹಗೊಳಿಸಲು ಅವಕಾಶ ಇದೆ, ನೀವು ಎಲ್ಲಿ ಇದ್ದಿರೋ ಅಲ್ಲಿಯೇ ನಿಯಮ 164 ಐಬಿ ಯಲ್ಲಿ ಸ್ಪಷ್ಟವಾಗಿ ಇದೆ, 10 ಶೆಡ್ಯೂಲ್ ಅಡಿ ಕ್ರಮಕ್ಕೆ ಅವಕಾಶ ಇದೆ ಎಂದರು. ನಿಮ್ಮ 30 ವರ್ಷದ ರಾಜಕೀಯ ಮುಗಿಸಲು ಬಿಜೆಪಿಯವರು ಯತ್ನ ಮಾಡುತ್ತಿದ್ದಾರೆ. ಹಾಗಾಗಿ ನಾಳೆ ಬಂದು ಸ್ಪೀಕರ್ ಎದುರು ಹಾಜರಾಗಿ ಇಲ್ಲದಿದ್ದಲ್ಲಿ ಸ್ಪೀಕರ್ ಕಾನೂನು ರೀತಿ ಕ್ರಮ ಕೈಗೊಳ್ಳಲಿದ್ದಾರೆ ಇದು ನಿಮಗೆ ಕಡೆಯ ಅವಕಾಶ ಎಂದು ಪರೋಕ್ಷವಾಗಿ ಎಚ್ಚರಿಕೆಯ ಸಂದೇಶವನ್ನು ರವಾನಿಸಿದರು.