ಬೆಂಗಳೂರು: ದೇಶದ ತುಂಬ ಹರಡಿರುವ ದ್ವೇಷದ ರಾಜಕಾರಣವನ್ನು ಹಿಮ್ಮೆಟ್ಟಿಸುವ ಕೆಲಸ ಕರ್ನಾಟಕದಿಂದ ಆರಂಭವಾಗಬೇಕಿದೆ ಎಂದು ದೆಹಲಿ ಮೂಲದ ಸಾಮಾಜಿಕ ಹೋರಾಟಗಾರ, ಮಾಜಿ ಎಎಪಿ ಮುಖಂಡ, ಸ್ವರಾಜ್ ಇಂಡಿಯಾ ಸಂಸ್ಥಾಪಕ ಯೋಗೇಂದ್ರ ಯಾದವ್ ಕರೆ ನೀಡಿದರು.
ಬುಧವಾರ ಪ್ರೆಸ್ ಕ್ಲಬ್ನಲ್ಲಿ ನಡೆದ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಕರ್ನಾಟಕವು ಸಾಂಸ್ಕೃತಿಕ, ಸಾಹಿತ್ಯದಲ್ಲಿ ಬಹಳ ಸಂಪದ್ಭರಿತವಾದ ನಾಡು. ಜ್ಞಾನಪೀಠ ಸಾಹಿತಿಗಳಾದ ಗಿರೀಶ್ ಕಾರ್ನಾಡ್, ಅನಂತ ಮೂರ್ತಿ, ಕುವೆಂಪು, ಬೇಂದ್ರೆ ಮುಂತಾದವರ ಬರಹಗಳನ್ನು ಓದಿ ಬೆಳೆದಿದ್ದೇನೆ. ಕರ್ನಾಟಕದ ದಲಿತ ಸಾಹಿತ್ಯದ ಬಗ್ಗೆ ಡಿ.ಆರ್. ನಾಗರಾಜ್, ದೇವನೂರು ಮಹಾದೇವರಿಂದ ಅರಿತಿದ್ದೇವೆ. ದಕ್ಷಿಣದಿಂದ ಉತ್ತರಕ್ಕೆ ಇಲ್ಲಿನ ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಕರೆದೊಯ್ಯಬೇಕಿದೆ. ಆದ್ದರಿಂದ ಎಲ್ಲ ರಾಜಕೀಯ ಪಕ್ಷಗಳು, ಜನ ಚಳವಳಿ ಸಂಘಟನೆಗಳು ಭಾರತ್ ಜೋಡೋ ಯಾತ್ರೆಯಲ್ಲಿ ಭಾಗವಹಿಸುವುದು ಬಹಳ ಮುಖ್ಯ ಎಂದು ಅಭಿಪ್ರಾಯಪಟ್ಟರು.
ಇದನ್ನೂ ಓದಿ: ಸರ್ಕಾರ ನಮ್ಮನ್ನು ಶತ್ರುಗಳ ರೀತಿ ನಡೆಸಿಕೊಳ್ಳುತ್ತಿದೆ: ಯೋಗೇಂದ್ರ ಯಾದವ್
ಸೆಪ್ಟೆಂಬರ್ 30 ರಂದು ಗುಂಡ್ಲುಪೇಟೆಯ ಮೂಲಕ ರಾಜ್ಯವನ್ನು ಪ್ರವೇಶಿಸುತ್ತಿರುವ ಭಾರತ್ ಜೋಡೋ ಪಾದಯಾತ್ರೆಯಲ್ಲಿ ಭಾವೈಕ್ಯ ಕರ್ನಾಟಕ ಬ್ಯಾನರ್ ಅಡಿಯಲ್ಲಿ ಎಲ್ಲ ಸಮಾನ ಮನಸ್ಕರು, ದೇಶಪ್ರೇಮಿಗಳು ಭಾಗವಹಿಸುತ್ತಿದ್ದಾಾರೆ. ಸದುದ್ದೇಶದಿಂದ ಕೂಡಿದ ಕಾಂಗ್ರೆಸ್ ಭಾರತ್ ಜೋಡೋ ಯಾತ್ರೆಗೆ ನಮ್ಮೆಲ್ಲರ ಬೆಂಬಲವಿದೆ ಎಂದು ತಿಳಿಸಿದರು.
ಸರ್ವಾಧಿಕಾರದಿಂದ ಆವರಿಸಿಕೊಂಡಿರುವ ದೇಶವನ್ನ ಸಂರಕ್ಷಿಸಬೇಕು: ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಸಂಸದೆ ಬಿ.ಟಿ. ಲಲಿತಾ ನಾಯಕ್, ದೇಶದ ಪ್ರಗತಿಪರ ಚಿಂತನೆಯ ಬಗ್ಗೆ ಯೋಚಿಸುವ ಪ್ರತಿಯೊಬ್ಬರು ಈ ಭಾರತ್ ಜೋಡೋ ಯಾತ್ರೆಯಲ್ಲಿ ಭಾಗವಹಿಸಿ, ಭ್ರಷ್ಟಾಚಾರ, ಸರ್ವಾಧಿಕಾರದಿಂದ ಆವರಿಸಿಕೊಂಡಿರುವ ಈ ದೇಶವನ್ನು ಸಂರಕ್ಷಿಸಬೇಕಿದೆ ಎಂದರು.
ಇದನ್ನೂ ಓದಿ: ಭಾರತ್ ಜೋಡೋ ಪಾದಯಾತ್ರೆಯಲ್ಲಿ ರಾಹುಲ್ ಗಾಂಧಿ ಜೊತೆ ಹೆಜ್ಜೆ ಹಾಕಲಿದ್ದೇನೆ: ಆರ್ ವಿ ದೇಶಪಾಂಡೆ