ಯಲಹಂಕ: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸುತ್ತ-ಮುತ್ತಲಿನ ಪ್ರದೇಶಕ್ಕೆ ಬಂಗಾರದ ಬೆಲೆ. ಸರ್ಕಾರಿ ಜಾಗ ಕಣ್ಣಿಗೆ ಬಿದ್ರೆ ಭೂಗಳ್ಳರು ಬೇಲಿ ಹಾಕಿ ಸ್ವಾಧೀನಪಡಿಸಿಕೊಳ್ಳುತ್ತಾರೆ. ಹೀಗೆ ಸ್ವಾಧೀನಪಡಿಸಿಕೊಂಡಿದ್ದ ಭೂಮಿಯನ್ನು ತಹಶೀಲ್ದಾರ್ ತೆರವುಗೊಳಿಸಿದ್ದಾರೆ.
24 ಮಂದಿ 21 ಎಕರೆ 19ಗುಂಟೆ ಸರ್ಕಾರಿ ಜಾಗವನ್ನು ನಕಲಿ ದಾಖಲೆ ಸೃಷ್ಟಿಸಿ ಜಮೀನು ಒತ್ತುವರಿ ಮಾಡಿದ್ರು. ಜಿಲ್ಲಾಧಿಕಾರಿಗಳ ಆದೇಶದಂತೆ ಕಾರ್ಯಾಚರಣೆ ನಡೆಸಿದ ಯಲಹಂಕ ತಹಶೀಲ್ದಾರ್ ರಘುಮೂರ್ತಿ ಅವರು ಕೋಟ್ಯಂತರ ರೂ. ಬೆಲೆ ಬಾಳುವ ಜಮೀನನ್ನು ಸ್ವಾಧೀನಕ್ಕೆ ಪಡೆದುಕೊಂಡು ಸರ್ಕಾರದ ವಶಕ್ಕೆ ನೀಡಿದರು.
ಯಲಹಂಕ ತಾಲೂಕಿನ ಚೊಕ್ಕನಹಳ್ಳಿ ಗ್ರಾಮದ ಸರ್ವೆ ನಂಬರ್ 75/4 ಮತ್ತು 75/6ರ ಒಟ್ಟು 21 ಎಕರೆ 19 ಗಂಟೆ ಸರ್ಕಾರಿ ಜಾಗ ಒತ್ತುವರಿಯಾಗಿತ್ತು. 24 ಮಂದಿ ನಕಲಿ ದಾಖಲೆ ಸೃಷ್ಟಿಸಿ 21 ಎಕರೆ ಜಮೀನನ್ನು ಗುಳುಂ ಮಾಡಿದ್ದರು. ಕಳೆದ 10 ವರ್ಷಗಳಿಂದ ಒತ್ತುವರಿದಾರರು ಖಾತೆ ಮಾಡಿಸಲು ಪ್ರಯತ್ನ ನಡೆಸುತ್ತಿದ್ದರು. ಸರ್ಕಾರಿ ದಾಖಲೆ ತಿದ್ದಿ ತಮ್ಮ ಹೆಸರಿಗೆ ಖಾತೆ ಮಾಡಿಸಲು ಅರ್ಜಿ ಹಾಕಿದ್ದರು. ನಕಲಿ ದಾಖಲೆ ಕಂಡುಬಂದ ಹಿನ್ನೆಲೆ ಜಿಲ್ಲಾಧಿಕಾರಿಗಳು ಅದು ಸರ್ಕಾರಿ ಜಾಗವೆಂದು ಆದೇಶ ನೀಡಿದ್ದರು. ಜಿಲ್ಲಾಧಿಕಾರಿಗಳ ಆದೇಶದ ಹಿನ್ನೆಲೆ ಯಲಹಂಕ ತಹಶೀಲ್ದಾರ್ ರಘುಮೂರ್ತಿ ಸರ್ಕಾರಿ ಜಾಗವನ್ನ ವಶಕ್ಕೆ ತೆಗೆದುಕೊಂಡರು.
ನಕಲಿ ದಾಖಲೆ ಸೃಷ್ಟಿಸಿ ಜಮೀನು ಒತ್ತುವರಿ ನಡೆಸಿದ 24 ಮಂದಿಯ ವಿರುದ್ಧ ಸಂಪಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.