ಬೆಂಗಳೂರು: ಯೇಸು ಕ್ರಿಸ್ತನ ಪ್ರತಿಮೆ ನಿರ್ಮಾಣ ಯೋಜನೆ ಎರಡು ವರ್ಷದ ಹಿಂದಿನ ಚಿಂತನೆ. ನಾನೂ ಈ ವರೆಗೂ ಕೇವಲ ಒಂದಲ್ಲ ಎರಡಲ್ಲ ನೂರಾರು ಹಿಂದೂ ದೇವಾಲಯಗಳ ನಿರ್ಮಾಣಕ್ಕೂ ನೆರವಾಗಿದ್ದೇನೆ. ಆದರೆ, ಪ್ರಚಾರ ಮಾಡಿಕೊಂಡಿಲ್ಲ ಎಂದು ಡಿಕೆಶಿ ಸ್ಪಷ್ಟಪಡಿಸಿದರು.
ಡಿಕೆ ಶಿವಕುಮಾರ್ ಇಂದು ತಮ್ಮ ಸದಾಶಿವ ನಗರ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕನಕಪುರದಲ್ಲಿ ನಿರ್ಮಾಣವಾಗುತ್ತಿರೋ ಯೇಸುವಿನ ಏಕಶಿಲಾ ಮೂರ್ತಿಯ ವಿಚಾರದ ಬಗ್ಗೆ ಸ್ಪಷ್ಟನೆ ನೀಡಿದರು. ಯೇಸು ಕ್ರಿಸ್ತನ ಪ್ರತಿಮೆ ನಿರ್ಮಾಣ ಯೋಜನೆ ಇಂದು ನಿನ್ನೆಯದ್ದಲ್ಲ. ಎರಡು ವರ್ಷಗಳ ಹಿಂದೆಯೇ ಈ ಬಗ್ಗೆ ಚಿಂತನೆ ನಡೆದಿತ್ತು. ಈಗ ಅಲ್ಲಿನ ಜನಕ್ಕೆ ನೀಡಿದ್ದ ಭರವಸೆ ಪೂರ್ಣಗೊಳಿಸಿದ್ದೇನೆ. ಇದಷ್ಟೇ ಅಲ್ಲ. ಈ ವರೆಗೂ ಒಂದಲ್ಲ ಎರಡಲ್ಲ ನೂರಾರು ದೇವಾಲಯಗಳ ನಿರ್ಮಾಣಕ್ಕೆ ನೆರವಾಗಿದ್ದೇನೆ. ಆದರೆ, ಅವ್ಯಾವುದನ್ನೂ ಸುದ್ದಿಗಾಗಿ ಮಾಡಿ, ಪ್ರಚಾರ ಮಾಡಿಲ್ಲ ಅಷ್ಟೇ ಎಂದರು.
ನಾನು ಕಲಿತಿದ್ದು ಕ್ರಿಶ್ಚಿಯನ್ ಸಂಸ್ಥೆಯಲ್ಲೇ. ಕನಕಪುರದ 95% ಜನ ಸದಾ ನನ್ನ ಬೆಂಬಲಕ್ಕೆ ನಿಂತವರು. ಅಷ್ಟೇಅಲ್ಲದೆ, ಹಾರೋಬೆಲೆ ಗ್ರಾಮದಲ್ಲಿ ಕ್ರೈಸ್ತ ಸಮುದಾಯ ಕನ್ನಡಕ್ಕಾಗಿ ದುಡಿಯುತ್ತಿದೆ. ಆ ಊರು ರಾಜ್ಯಕ್ಕೆ ನೂರಾರು ಸಿಸ್ಟರ್ ಗಳನ್ನು ಕೊಟ್ಟಿದೆ. ನಿನ್ನೆ ಕ್ರಿಸ್ಮಸ್ ಇದ್ದಿದ್ದರಿಂದ ಹಕ್ಕು ಪತ್ರ ಕೊಟ್ಟಿದ್ದೇನೆ. ಹಿಂದೆಯೇ ಹಣ ಕಟ್ಟಬೇಕಿತ್ತು ಜೈಲಲ್ಲಿದ್ದರಿಂದ ಆಗಿರಲಿಲ್ಲ ಎಂದರು.
ಇನ್ನೂ ಕೆಪಿಸಿಸಿ ಅಧ್ಯಕ್ಷರ ನೇಮಕ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಹೈಕಮಾಂಡ್ ನಿಂದ ಏನೂ ಮಾಹಿತಿ ಬಂದಿಲ್ಲ. ಸದ್ಯಕ್ಕೆ ದೆಹಲಿಗೆ ಹೋಗುವ ಪ್ರಮೇಯವಿಲ್ಲ. ನನಗೆ ಮತ್ತೆ ಎರಡು ಇಡಿ ನೋಟಿಸ್ ಬಂದಿದೆ. ಅದಕ್ಕಾಗಿ ನಾನು ದೆಹಲಿಗೆ ಹೋಗಬೇಕಾಗುತ್ತದೆ. ಅಧ್ಯಕ್ಷರ ಬಗ್ಗೆ ಇನ್ನೂ ನನಗೇನು ಗೊತ್ತಿಲ್ಲ ಎಂದು ತಿಳಿಸಿದರು.