ಬೆಂಗಳೂರು: ಪೂರ್ವ ಮುಂಗಾರಿನ ಅಬ್ಬರ ಶುರುವಾಗಿದೆ. ರಾಜ್ಯದ ಐದು ಜಿಲ್ಲೆಗಳಲ್ಲಿ ಭಾರೀ ಮಳೆ ಮುನ್ಸೂಚನೆ ನೀಡಿರುವ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಘೋಷಣೆ ಮಾಡಿದೆ.
ರಾಜ್ಯದ ದಕ್ಷಿಣ ಒಳನಾಡು ಹಾಗೂ ಮಲೆನಾಡಿನ ಜಿಲ್ಲೆಗಳಾದ ಚಾಮರಾಜನಗರ, ಚಿಕ್ಕಮಗಳೂರು, ಹಾಸನ, ಕೊಡಗು ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ ಇಂದು ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಅಲ್ಲದೇ ಏ.24 ರವರೆಗೂ ಮಳೆ ಮುಂದುವರಿಯಲಿದೆ ಎಂದು ಮುನ್ಸೂಚನೆ ನೀಡಲಾಗಿದೆ.
ನಿನ್ನೆಯೂ ದ.ಒಳನಾಡು ಹಾಗೂ ಉ.ಒಳನಾಡಿನ ಅಲ್ಲಲ್ಲಿ ಮಳೆ ಸುರಿದಿದ್ದು, ಕರಾವಳಿಯಲ್ಲಿ ಒಣಹವೆ ಇತ್ತು. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 35 ಮಿ.ಮೀ, ಸಿರಾದಲ್ಲಿ 34 ಮಿ.ಮೀ ಮಳೆ ದಾಖಲಾಗಿದೆ.
ಕಲಬುರಗಿಯಲ್ಲಿ ಗರಿಷ್ಠ ಉಷ್ಣಾಂಶ 40.5, ಬೀದರ್ 38.2, ರಾಯಚೂರು 39, ವಿಜಯಪುರ 38.5, ಗದಗ 36.2 , ಬೆಂಗಳೂರಿಲ್ಲಿ 34.6 ದಾಖಲಾಗಿತ್ತು.
ದಕ್ಷಿಣ ಒಳನಾಡು ಹಾಗೂ ಕರಾವಳಿ ಜಿಲ್ಲೆಗಳಲ್ಲಿ ಏ. 20 ರಿಂದ 24 ರ ವರೆಗೆ ಅಲ್ಲಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಉ.ಒಳನಾಡಿನಲ್ಲಿ ಎ.20,21, 24 ರಂದು ಒಣಹವೆ ಮುಂದುವರಿಯುವ ಸಾಧ್ಯತೆ ಇದೆ. ಎ.22,23 ರಂದು ಉತ್ತರ ಒಳನಾಡಿನ ಅಲ್ಲಲ್ಲಿ ಹಗುರ ಮಳೆಯಾಗುವ ಸಾಧ್ಯತೆ ಇದೆ ಇಲಾಖೆ ತಿಳಿಸಿದೆ.
ಇದನ್ನೂ ಓದಿ: ಕಳೆದ 24 ಗಂಟೆಯಲ್ಲಿ 2,95,041 ಜನರಿಗೆ ಸೋಂಕು; ಎರಡು ಸಾವಿರಕ್ಕೂ ಹೆಚ್ಚು ಮಂದಿ ಸಾವು